ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಈ ಎರಡು ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು ತೀವ್ರ ಪೈಪೋಟಿ ನಡೆಯಲಿದೆ. ಈ ಸೆಣೆಸಾಟಕ್ಕಾಗಿ ಎರಡು ತಂಡಗಳು ಕೂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ.
ಪಾಕಿಸ್ತಾನ ತಂಡ ಸೂಪರ್ 4 ಹಂತದಲ್ಲಿ ಈಗಾಗಲೇ ಒಂದು ಪಂದ್ಯವನ್ನು ಆಡಿದ್ದು ಬಾಂಗ್ಲಾದೇಶ ತಂಡವನ್ನು ಎದುರಿಸಿತ್ತು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನೀಡಿದಪಾಕ್ ಪಡೆ ಭರ್ರಿ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಭಾರತದ ವಿರುದ್ಧದ ಪಂದ್ಯಕ್ಕೆ ಎಲ್ಲಾ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಂಡಂತಿದೆ.

ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನದ ವಿರುದ್ಧ ಭಾನುವಾರ ನಡೆಯಲಿರುವ ಈ ರೋಚಕ ಸೆಣಸಾಟಕ್ಕಾಗಿ ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಗುರುವಾರ ಹಾಗೂ ಶುಕ್ರವಾರ ಟೀಮ್ ಇಂಡಿಯಾದ ಆಟಗಾರರ ಅಭ್ಯಾಸ ತೀವ್ರವಾಗಿ ನಡೆಯುತ್ತಿದೆ. ಭಾರತದ ಅಭ್ಯಾಸದ ವಿಡಿಯೋವನ್ನು ಬಿಸಿಸಿಐ ಬಿಡುಗಡೆಗೊಳಿಸಿದ್ದು ಇದರಲ್ಲಿ ಭಾರತೀಯ ಆಟಗಾರರು ಹೆವಿ ವೈಟ್‌ಗಳನ್ನು ಎತ್ತುವುದು, ಸ್ಕ್ವಾಟ್ಸ್‌ಗಳನ್ನು ಮಾಡುವುದು ಸೇರಿದಂತೆ ಹಲವು ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಂಡಿರುವುದು ಕಾಣಬಹುದು.
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್‌ದೀಪ್ ಯಾದವ್ ಭಾರತೀಯ ಆಟಗಾರರ ಪಡೆ ಜೊತೆಯಾಗಿ ಜಿಮ್‌ನಲ್ಲಿ ತೀವ್ರವಾದ ತಾಲೀಮು ನಡೆಸಲು ಕಾರಣ ಏನೆಂಬುದನ್ನು ಹಂಚಿಕೊಂಡಿದ್ದಾರೆ. "ಮುಂದಿನ ಪಂದ್ಯಕ್ಕೆ ನಾವು ನಾಲ್ಕು ದಿನಗಳ ಅಂತರದವನ್ನು ಹೊಂದಿದ್ದೇವೆ. ಹೀಗಾಗಿ ಇದು ನಮ್ಮ ದೇಹದ ಮೇಲೆ ಕಾರ್ಯನಿರ್ವಹಿಸಲು ನಮಗೆ ದೊರೆತ ಅವಕಾಶವಾಗಿದೆ. ಆಟಕ್ಕೆ ಇನ್ನೂ ಮೂರು ದಿನಗಳು ಇರುವ ಕಾರಣ ಉತ್ತಮವಾಗಿ ಚೇತರಿಕೆಯಾಗಬಹುದು ಎನ್ನುವ ಕಾರಣಕ್ಕಾಗಿ ಇಂದು ನಾವು ತೀವ್ರವಾದ ವರ್ಕೌಟ್ ಮಾಡಿದ್ದೇವೆ" ಎಂದಿದ್ದಾರೆ ಕುಲ್‌ದೀಪ್ ಯಾದವ್
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೂಡ ಟೀಮ್ ಇಂಡಿಯಾ ಆಟಗಾರರ ಅಭ್ಯಾಸದ ವಿಚಾರವಾಗಿ ಮಾತನಾಡಿದ್ದಾರೆ. "ಮುಂದಿನ ದಿನಗಳಲ್ಲಿ ಸ್ಥಿರವಾಗಿ ಪಂದ್ಯಗಳನ್ನು ಆಡುತ್ತಿರಬೇಕಾಗಿರುವ ಕಾರಣ ದೈನಂದಿನ ತಾಲೀಮುಗಳನ್ನು ನಡೆಸಬೇಕಾಗುತ್ತದೆ. ವರ್ಕೌಟ್‌ಗಳನ್ನು ನಡೆಸದಿದ್ದಲ್ಲಿ ಮಸಲ್‌ಗಳನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್.
ಇನ್ನು ಶಾರ್ದೂಲ್ ಠಾಕೂರ್ ಈ ಅಭ್ಯಾಸದ ಬಗ್ಗೆ ಮಾತನಾಡಿದ್ದು "ಈ ಟೂರ್ನಿಯಲ್ಲಿ ಮೊದಲ ಬಾರಿಗೆ ನಾವು ನಾಲ್ಕು ಅಥವಾ ಐದು ದಿನಗಳ ವಿರಾಮವನ್ನು ಹೊಂದಿದ್ದೇವೆ. ಸಾಮಾನ್ಯವಾಗಿ ನಾವು ಇಂಥಾ ಸಂದರ್ಭಗಳಲ್ಲಿ ಪ್ರಯಾಣಿಸಬೇಕಾಗುತ್ತದೆ. ಒಂದು ದಿನ ವಿರಾಮದಲ್ಲಿದ್ದೆವು, ಎಲ್ಲರೂ ಜೊತೆಯಾಗಿರುವ ಕಾರಣ ಒಟ್ಟಾಗಿ ಅಭ್ಯಾಸ ನಡೆಸಲು ಮುಂದಾಗಿದ್ದೇವೆ, ಹಾಗಾಗಿ ಇಂದು ಜಜಿಮ್‌ನಲ್ಲಿ ಕಾಲ ಕಳೆದು ನಾಳೆಯಿಂದ ಮೈದಾನದಲ್ಲಿ ಅಭ್ಯಾಸ ನಡೆಸಲಿದ್ದೇವೆ" ಎಂದಿದ್ದಾರೆ ಶಾರ್ದೂಲ್ ಠಾಕೂರ್.
ಭಾನುವಾರ ಭಾರತ ತಂಡ ಬಾಬರ್ ಅಜಂ ನೇತತ್ವದ ಪಾಕಿಸ್ತಾನ ತಂಡದ ವಿರುದ್ಧ ಸೆಣೆಸಾಟ ನಡೆಸಲಿದೆ. ಸೂಪರ್ 4 ಹಂತದಲ್ಲಿ ಭಾರತ ತಂಡಕ್ಕೆ ಇದು ಮೊದಲ ಪಂದ್ಯವಾಗಿದ್ದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೆ ಟೂರ್ನಿಯಲ್ಲಿ ಮಳೆಯ ಕಾರಣದಿಂದಾಗಿ ಪೂರ್ಣ ಪ್ರಮಾಣದಲ್ಲಿ ಪಂದ್ಯವನ್ನು ಆಡುವ ಅವಕಾಶ ಭಾರತ ತಂಡಕ್ಕೆ ದೊರೆತಿಲ್ಲ. ಹೀಗಾಗಿ ಪಾಕ್ ವಿರುದ್ಧದ ಪಂದ್ಯ ತೀವ್ರ ಕುತೂಹಗಲ ಮೂಡಿಸಿದೆ.