ಆಸ್ಟ್ರೇಲಿಯಾ vs ಪಾಕ್ 3ನೇ ಟೆಸ್ಟ್: ಆಸ್ಟ್ರೇಲಿಯಾ 5 ವಿಕೆಟ್‌ಗೆ 232 ರನ್; ಖವಾಜಾ ಶತಕ ಜಸ್ಟ್ ಮಿಸ್

ಹಲವಾರು ವರ್ಷಗಳ ನಂತರ ಆಸ್ಟ್ರೇಲಿಯಾ ಪಾಕಿಸ್ತಾನ ಪ್ರವಾಸ ಕೈಗೊಂಡಾಗ ಈ ಬಾರಿ ಪಾಕ್‌ನಲ್ಲಿ ನಡೆಯಲಿರುವ ಹಣಾಹಣಿ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ ಎಂಬ ನಿರೀಕ್ಷೆ ಹುಟ್ಟುಕೊಂಡಿತ್ತು. ಆದರೆ, ಈ ನಿರೀಕ್ಷೆಗಳೆಲ್ಲಾ ಸದ್ಯಕ್ಕೆ ಹುಸಿಯಾಗಿದ್ದು, ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ನೀರಸವೆನಿಸಿದೆ. ಹೌದು, ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸಿದ್ದು, ಈಗಾಗಲೇ ಇತ್ತಂಡಗಳ ನಡುವೆ ಮೊದಲಿಗೆ ರಾವಲ್ಲಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದ್ದು, ನಂತರ ಕರಾಚಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡಿತು. ಹೌದು, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದು, ಇದೀಗ ಮೂರನೇ ಟೆಸ್ಟ್ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ.
ಇತ್ತಂಡಗಳ ನಡುವಿನ ಈ ಮೂರನೇ ಟೆಸ್ಟ್ ಪಂದ್ಯದಲ್ಲಿ ಯಾವ ತಂಡ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲಿದೆ ಎಂಬ ಕುತೂಹಲ ಇದೀಗ ಹುಟ್ಟಿಕೊಂಡಿದ್ದು, ಈ ಪಂದ್ಯದಲ್ಲಾದರೂ ಫಲಿತಾಂಶ ಬರುತ್ತಾ ಅಥವಾ ಈ ಪಂದ್ಯವೂ ಕೂಡ ಡ್ರಾನಲ್ಲಿ ಅಂತ್ಯಗೊಳ್ಳುತ್ತಾ ಎಂಬ ಅನಿಸಿಕೆಗಳನ್ನೂ ಸಹ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಲಾಹೋರ್‌ನ ಗಡ್ಡಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಅಂತಿಮ ಟೆಸ್ಟ್ ಪಂದ್ಯ ಇಂದು ( ಮಾರ್ಚ್ 21 ) ಆರಂಭವಾಗಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ಪಂದ್ಯದ ಮೊದಲನೇ ದಿನದಾಟದಂತ್ಯಕ್ಕೆ 88 ಓವರ್‌ಗಳನ್ನು ಎದುರಿಸಿರುವ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 232 ರನ್ ಕಲೆಹಾಕಿದ್ದು, ಉತ್ತಮ ಸ್ಥಿತಿಯಲ್ಲಿದೆ. ಇನ್ನು ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ 7 ರನ್ ಗಳಿಸಿ ಔಟ್ ಆದರೆ, ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ನಸ್ ಲ್ಯಾಬುಸ್ಚಾಗ್ನೆ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಆಸ್ಟ್ರೇಲಿಯಾ 8 ರನ್‌ಗಳಿಗೆ 2 ವಿಕೆಟ್‌ಗಳನ್ನು ವೇಗವಾಗಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಸಂದರ್ಭದಲ್ಲಿ ಒಂದಾದ ಆಸ್ಟ್ರೇಲಿಯಾದ ಮತ್ತೋರ್ವ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವನ್ ಸ್ಮಿತ್ 138 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಆಸರೆಯಾದರು. ಹೀಗೆ ಉತ್ತಮ ಇನ್ನಿಂಗ್ಸ್ ಕಟ್ಟಲು ಶುರು ಮಾಡಿದ ಸ್ಟೀವನ್ ಸ್ಮಿತ್ 59 ರನ್ ಗಳಿಸಿ ಔಟ್ ಆದರೆ, ಉಸ್ಮಾನ್ ಖವಾಜಾ 91 ರನ್ ಗಳಿಸಿ ಔಟ್ ಆಗಿ ಶತಕದ ಹೊಸ್ತಲಲ್ಲಿ ಎಡವಿದರು. ಇನ್ನುಳಿದಂತೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ಔಟ್ ಆದರೆ, ಕ್ಯಾಮರೂನ್ ಗ್ರೀನ್ ಅಜೇಯ 26 ರನ್ ಹಾಗೂ ಅಲೆಕ್ಸ್ ಕ್ಯಾರಿ ಅಜೇಯ 8 ರನ್ ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 232 ರನ್ ಗಳಿಸಿದೆ. ಇನ್ನು ಪಾಕಿಸ್ತಾನದ ಪರ ಶಾಹಿನ್ ಅಫ್ರಿದಿ ಮತ್ತು ನಸೀಮ್ ಶಾ ತಲಾ 2 ವಿಕೆಟ್ ಪಡೆದರೆ, ಸಜಿದ್ ಖಾನ್ ಒಂದು ವಿಕೆಟ್ ಪಡೆದರು. ಹೀಗೆ ಮೊದಲ ದಿನದಾಟದಲ್ಲಿ ಉಸ್ಮಾನ್ ಖವಾಜಾ ಹಾಗೂ ಸ್ಟೀವನ್ ಸ್ಮಿತ್ ಜವಾಬ್ದಾರಿಯುತ ಆಟದ ನೆರವಿನಿಂದ ಆಸ್ಟ್ರೇಲಿಯಾ ಮುಖಭಂಗದಿಂದ ಪಾರಾಗಿದ್ದು ಎರಡನೇ ದಿನದಾಟದಂದು ಯಾವ ರೀತಿ ಆಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಬೇಸರ, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಫವಾದ್ ಅಲ್-ಆಮ್, ಮುಹಮ್ಮದ್ ರಿಜುವಾ (ವಿಕೆಟ್ ಕೀಪರ್), ನಸೀಮ್ ಶಾ, ಸಾಜಿದ್ ಖಾನ್, ಹಸನ್ ಅಲಿ, ನಮಿನ್ ಅಲಿ, ಶಾಹೀನ್ ಅಫ್ರಿದಿ
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ( ನಾಯಕ ) ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications