ಪಾಕ್ vs ಆಸ್ಟ್ರೇಲಿಯಾ 3ನೇ ಟೆಸ್ಟ್: ಮೂರನೇ ದಿನದಾಟದಲ್ಲಿ ಮುಗ್ಗರಿಸಿದ ಪಾಕಿಸ್ತಾನ

ಹಲವಾರು ವರ್ಷಗಳ ನಂತರ ಆಸ್ಟ್ರೇಲಿಯಾ ಪಾಕಿಸ್ತಾನ ಪ್ರವಾಸ ಕೈಗೊಂಡಾಗ ಈ ಬಾರಿ ಪಾಕ್‌ನಲ್ಲಿ ನಡೆಯಲಿರುವ ಹಣಾಹಣಿ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ ಎಂಬ ನಿರೀಕ್ಷೆ ಹುಟ್ಟುಕೊಂಡಿತ್ತು. ಆದರೆ, ಈ ನಿರೀಕ್ಷೆಗಳೆಲ್ಲಾ ಸದ್ಯಕ್ಕೆ ಹುಸಿಯಾಗಿದ್ದು, ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ನೀರಸವೆನಿಸಿದೆ. ಹೌದು, ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸಿದ್ದು, ಈಗಾಗಲೇ ಇತ್ತಂಡಗಳ ನಡುವೆ ಮೊದಲಿಗೆ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದ್ದು, ನಂತರ ಕರಾಚಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡಿತು. ಹೌದು, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದು, ಇದೀಗ ಮೂರನೇ ಟೆಸ್ಟ್ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಾದರೂ ಫಲಿತಾಂಶ ಬರುತ್ತಾ ಅಥವಾ ಈ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡು ಸರಣಿ ಫಲಿತಾಂಶವಿಲ್ಲದೇ ಉಳಿದುಕೊಳ್ಳುತ್ತಾ ಎಂಬ ಪ್ರಶ್ನೆಯ ನಡುವೆಯೇ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯ ಮಾರ್ಚ್ 21ರಂದು ಲಾಹೋರ್‌ನ ಗಡ್ಡಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡು ಮೊದಲು ಬ್ಯಾಟಿಂಗ್ ಮಾಡಿ ಮೊದಲನೇ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಕ್ಯಾಮರೂನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ಅವರ ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ 391 ರನ್ ಗಳಿಸಿ ಆಲ್ಔಟ್ ಆಯಿತು.
ಇನ್ನು ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂದು ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಅತಿಥೇಯ ಪಾಕಿಸ್ತಾನ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿತ್ತು. ಪಾಕ್ ಪರ ಎರಡನೇ ವಿಕೆಟ್‌ಗೆ ಜತೆಯಾದ ಆರಂಭಿಕ ಆಟಗಾರ ಅಬ್ದುಲ್ಲಾ ಶಫಿಕ್ ಮತ್ತು ಅಜರ್ ಅಲಿ ಅಜೇಯ 70 ರನ್‌ಗಳ ಜತೆಯಾಟವನ್ನಾಡಿದ್ದರು. ಎರಡನೇ ದಿನದಾಟದಂತ್ಯಕ್ಕೆ ಅಬ್ದುಲ್ಲಾ ಶಫಿಕ್ ಅಜೇಯ 45 ರನ್ ಗಳಿಸಿದರೆ, ಅಜರ್ ಅಲಿ ಅಜೇಯ 30 ರನ್ ಕಲೆಹಾಕಿ ಕಣದಲ್ಲಿದ್ದರು. ಈ ಮೂಲಕ ಪಾಕಿಸ್ತಾನ ಎರಡನೇ ದಿನದಾಟದಂತ್ಯಕ್ಕೆ 301 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು. ಹೀಗೆ ಎರಡನೇ ದಿನದಾಟದಂದು ಈ ಜೋಡಿಯ ಉತ್ತಮ ಆಟದ ಮೂಲಕ ಮೂರನೇ ದಿನದಾಟದಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹುಟ್ಟುಹಾಕಿದ್ದ ಪಾಕಿಸ್ತಾನ ಆ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಮೂರನೇ ದಿನದಾಟದಂದು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿರುವ ಪಾಕಿಸ್ತಾನ 268 ರನ್‌ಗಳಿಗೆ ಆಲ್ಔಟ್ ಆಗಿ 123 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ. ಇನ್ನು ಎರಡನೇ ದಿನ ವಿಕೆಟ್ ಕಾಯ್ದುಕೊಂಡಿದ್ದ ಅಬ್ದುಲ್ಲಾ ಶಫಿಕ್ ಮತ್ತು ಅಜರ್ ಅಲಿ ಜೋಡಿ ಮೂರನೇ ದಿನದ ಆರಂಭದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಮೂಲಕ ಒಟ್ಟಾರೆ 150 ರನ್‌ಗಳ ಜತೆಯಾಟವನ್ನಾಡಿದರು. ಅಬ್ದುಲ್ಲಾ ಶಫಿಕ್ 81 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಅಜರ್ ಅಲಿ 78 ರನ್ ಗಳಿಸಿ ಔಟ್ ಆದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಬರ್ ಅಜಮ್ 67 ರನ್ ಗಳಿಸಿದ್ದು ಬಿಟ್ಟರೆ ನಂತರ ಕಣಕ್ಕಿಳಿದ ಯಾವುದೇ ಆಟಗಾರ ಕೂಡ 15 ರನ್ ಗಡಿ ದಾಟುವ ಯತ್ನ ಮಾಡಲೇ ಇಲ್ಲ. ಫಾವದ್ ಅಲಮ್ 13 ರನ್, ಮೊಹಮ್ಮದ್ ರಿಜ್ವಾನ್ 1 ರನ್, ಸಜಿದ್ ಖಾನ್ 6 ರನ್ ಗಳಿಸಿದರೆ, ನಂತರ ಕಣಕ್ಕಿಳಿದ ನೌಮನ್ ಅಲಿ, ಹಸನ್ ಅಲಿ ಹಾಗೂ ನಸೀಮ್ ಶಾ ಶೂನ್ಯಕ್ಕೆ ಔಟ್ ಆದರೆ, ಶಾಹಿನ್ ಅಫ್ರಿದಿ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಹೀಗೆ ಮೊದಲ ನಾಲ್ಕು ವಿಕೆಟ್‌ಗಳವರೆಗೆ ಉತ್ತಮ ರನ್ ಕಲೆಹಾಕಿ ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ ನಂತರದ ವಿಕೆಟ್‌ಗಳನ್ನು ಸಾಲುಸಾಲಾಗಿ ಕಳೆದುಕೊಂಡಿದೆ. ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರು ಹಾಗೂ ನಾಥನ್ ಲಿಯಾನ್ ಒಂದು ವಿಕೆಟ್ ಪಡೆದರು. ಹೀಗೆ ಪಾಕಿಸ್ತಾನ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 268 ರನ್‌ಗಳಿಗೆ ಕಟ್ಟಿಹಾಕಿದ ಆಸ್ಟ್ರೇಲಿಯಾ ಮೂರನೇ ದಿನದಂದೇ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 11 ರನ್ ಕಲೆಹಾಕಿ 134 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿರುವ ಉಸ್ಮಾನ್ ಖವಾಜಾ ಅಜೇಯ 7 ರನ್ ಹಾಗೂ ಡೇವಿಡ್ ವಾರ್ನರ್ ಅಜೇಯ 4 ರನ್ ಕಲೆಹಾಕಿ ಕಣದಲ್ಲಿದ್ದಾರೆ. ಇನ್ನು ಈ ಪಂದ್ಯದ ಎರಡನೇ ಇನ್ನಿಂಗ್ಸ್ ಮೂರನೇ ದಿನದಂದೇ ಆರಂಭವಾಗಿದ್ದು, ಈ ಪಂದ್ಯದಲ್ಲಿ ಫಲಿತಾಂಶ ಸಿಗುವುದು ಖಚಿತ ಎಂದು ಹೇಳಬಹುದು.
ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಬೇಸರ, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಫವಾದ್ ಅಲ್-ಆಮ್, ಮುಹಮ್ಮದ್ ರಿಜುವಾ (ವಿಕೆಟ್ ಕೀಪರ್), ನಸೀಮ್ ಶಾ, ಸಾಜಿದ್ ಖಾನ್, ಹಸನ್ ಅಲಿ, ನಮಿನ್ ಅಲಿ, ಶಾಹೀನ್ ಅಫ್ರಿದಿ
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ( ನಾಯಕ ) ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications