
ಹಲವಾರು ವರ್ಷಗಳ ನಂತರ ಆಸ್ಟ್ರೇಲಿಯಾ ಪಾಕಿಸ್ತಾನ ಪ್ರವಾಸ ಕೈಗೊಂಡಾಗ ಈ ಬಾರಿ ಪಾಕ್‌ನಲ್ಲಿ ನಡೆಯಲಿರುವ ಹಣಾಹಣಿ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ ಎಂಬ ನಿರೀಕ್ಷೆ ಹುಟ್ಟುಕೊಂಡಿತ್ತು. ಆದರೆ, ಈ ನಿರೀಕ್ಷೆಗಳೆಲ್ಲಾ ಸದ್ಯಕ್ಕೆ ಹುಸಿಯಾಗಿದ್ದು, ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ನೀರಸವೆನಿಸಿದೆ. ಹೌದು, ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸಿದ್ದು, ಈಗಾಗಲೇ ಇತ್ತಂಡಗಳ ನಡುವೆ ಮೊದಲಿಗೆ ರಾವಲ್ಲಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದ್ದು, ನಂತರ ಕರಾಚಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡಿತು. ಹೌದು, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದು, ಇದೀಗ ಮೂರನೇ ಟೆಸ್ಟ್ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಾದರೂ ಫಲಿತಾಂಶ ಬರುತ್ತಾ ಅಥವಾ ಈ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡು ಸರಣಿ ಫಲಿತಾಂಶವಿಲ್ಲದೇ ಉಳಿದುಕೊಳ್ಳುತ್ತಾ ಎಂಬ ಪ್ರಶ್ನೆಯ ನಡುವೆಯೇ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯ ಮಾರ್ಚ್ 21ರಂದು ಲಾಹೋರ್‌ನ ಗಡ್ಡಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡು ಮೊದಲು ಬ್ಯಾಟಿಂಗ್ ಮಾಡಿದೆ.
ಹೀಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 8 ರನ್‌ಗಳಿಗೆ 2 ವಿಕೆಟ್‌ಗಳನ್ನು ವೇಗವಾಗಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಉಸ್ಮಾನ್ ಖವಾಜಾ ( 91 ರನ್ ) ಮತ್ತು ಸ್ಟೀವನ್ ಸ್ಮಿತ್ ( 59 ರನ್ ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸುಧಾರಿಸಿಕೊಂಡ ಆಸ್ಟ್ರೇಲಿಯಾ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 232 ರನ್ ಕಲೆಹಾಕಿತ್ತು ಹಾಗೂ ಕ್ಯಾಮರೂನ್ ಗ್ರೀನ್ ಅಜೇಯ 26 ರನ್ ಹಾಗೂ ಅಲೆಕ್ಸ್ ಕ್ಯಾರಿ ಅಜೇಯ 8 ರನ್ ಗಳಿಸಿ ಕಣದಲ್ಲಿದ್ದರು. ಇನ್ನು ಸ್ಕ್ರೀಜ್ ಕಾಯ್ದುಕೊಂಡಿದ್ದ ಈ ಜೋಡಿ ಎರಡನೇ ದಿನದಾಟವನ್ನು ಉತ್ತಮವಾಗಿ ಆರಂಭಿಸಿತು. ಅಲೆಕ್ಸ್ ಕ್ಯಾರಿ 67 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ 79 ರನ್ ಕಲೆಹಾಕಿದರು. ಇನ್ನುಳಿದಂತೆ ಮಿಚೆಲ್ ಸ್ಟಾರ್ಕ್ 13 ರನ್, ಪ್ಯಾಟ್ ಕಮಿನ್ಸ್ ಅಜೇಯ 11 ರನ್, ನಾಥನ್ ಲಿಯಾನ್ 4 ರನ್ ಹಾಗೂ ಮಿಚೆಲ್ ಸ್ವೆಪ್‌ಸನ್ 9 ರನ್ ಕಲೆಹಾಕಿದರು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 391 ರನ್‌ಗಳಿಗೆ ಆಲ್‌ಔಟ್ ಆಗಿದೆ. ಹೀಗೆ ಆರಂಭದಲ್ಲಿ ಹಾಗೂ ಮಧ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್ ಕಳೆದುಕೊಂಡರೂ ಸಹ ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ ಮತ್ತು ಕ್ಯಾಮರೂನ್ ಗ್ರೀನ್ ಈ ನಾಲ್ವರು ಆಟಗಾರರ ಆಕರ್ಷಕ ಅರ್ಧಶತಕದ ನೆರವಿನಿಂದ ಪೈಪೋಟಿಯುತ ಮೊತ್ತವನ್ನೇ ಕಲೆಹಾಕಿದೆ. ಇನ್ನು ಪಾಕಿಸ್ತಾನದ ಪರ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡರೆ, ನೌಮನ್ ಅಲಿ ಮತ್ತು ಸಜಿದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ ವಿಕೆಟ್ ಕಳೆದುಕೊಂಡು ಪುಟಿದೆದ್ದು ಪೈಪೋಟಿಯುತ ರನ್ ಕಲೆಹಾಕಿದ ಆಸ್ಟ್ರೇಲಿಯಾಗೆ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿ ಪ್ರತ್ಯುತ್ತರವನ್ನು ನೀಡಿದ್ದು, ಎರಡನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿದೆ. ತಂಡ 20 ರನ್ ಗಳಿಸಿದ್ದಾಗಲೇ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ( 11 ರನ್ ) ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆದರೆ, ಎರಡನೇ ವಿಕೆಟ್‌ಗೆ ಜತೆಯಾದ ಆರಂಭಿಕ ಆಟಗಾರ ಅಬ್ದುಲ್ಲಾ ಶಫಿಕ್ ಮತ್ತು ಅಜರ್ ಅಲಿ ಅಜೇಯ 70 ರನ್‌ಗಳ ಜತೆಯಾಟವನ್ನಾಡಿದ್ದಾರೆ. ಅಬ್ದುಲ್ಲಾ ಶಫಿಕ್ ಅಜೇಯ 45 ರನ್ ಗಳಿಸಿದರೆ, ಅಜರ್ ಅಲಿ ಅಜೇಯ 30 ರನ್ ಕಲೆಹಾಕಿ ಕಣದಲ್ಲಿದ್ದಾರೆ. ಸದ್ಯ ಎರಡನೇ ದಿನದಾಟದಂತ್ಯಕ್ಕೆ ಪಾಕಿಸ್ತಾನ 301 ರನ್‌ಗಳ ಹಿನ್ನಡೆಯನ್ನು ಅನುಭವಿಸಿದ್ದು, ಮೂರನೇ ದಿನದಂದು ಉತ್ತಮ ರನ್ ಗಳಿಸುತ್ತಾ ಅಥವಾ ಆಸ್ಟ್ರೇಲಿಯಾಗಿಂತ ಕಡಿಮೆ ರನ್ ಗಳಿಸಿ ಹಿನ್ನಡೆಗೆ ಒಳಗಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಬೇಸರ, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಫವಾದ್ ಅಲ್-ಆಮ್, ಮುಹಮ್ಮದ್ ರಿಜುವಾ (ವಿಕೆಟ್ ಕೀಪರ್), ನಸೀಮ್ ಶಾ, ಸಾಜಿದ್ ಖಾನ್, ಹಸನ್ ಅಲಿ, ನಮಿನ್ ಅಲಿ, ಶಾಹೀನ್ ಅಫ್ರಿದಿ
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ( ನಾಯಕ ) ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್