ಟಿ20 ವಿಶ್ವಕಪ್ ಭಾರತ ತಂಡದ ಆಯ್ಕೆ ಬಗ್ಗೆ ಮೊಹಮ್ಮದ್ ಅಜರುದ್ದೀನ್ ಅಸಮಾಧಾನ
ಸೆಪ್ಟೆಂಬರ್ 12 ರಂದು ಬಿಸಿಸಿಐ ಆಯ್ಕೆಗಾರರು ಆಯ್ಕೆ ಮಾಡಿದ ಭಾರತದ 15 ಸದಸ್ಯರ ಟಿ20 ವಿಶ್ವಕಪ್ ತಂಡದಿಂದ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟಿರುವುದಕ್ಕೆ ಮೊಹಮ್ಮದ್ ಅಜರುದ್ದೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ ಇಬ್ಬರೂ ನಾಲ್ಕು ಸದಸ್ಯರ ಸ್ಟ್ಯಾಂಡ್‌ಬೈ ಪಟ್ಟಿಯ ಭಾಗವಾಗಿದ್ದಾರೆ ಮತ್ತು ಮುಖ್ಯ ಪಂದ್ಯಾವಳಿಯ ಸಮಯದಲ್ಲಿ ಕೆಲವು ಆಟಗಾರರಿಗೆ ಗಾಯವಾದರೆ ಮಾತ್ರ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇರುತ್ತದೆ. ಆಸ್ಟ್ರೇಲಿಯಾದಂತದ ವೇಗದ ಪಿಚ್‌ಗಳಲ್ಲಿ ಮೊಹಮ್ಮದ್ ಶಮಿ ಅವರಂತಹ ಅನುಭವಿ ವೇಗಿಗಳು ತಂಡದಲ್ಲಿರಬೇಕಿತ್ತು ಎಂದು ಹಲವರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ.
ಮೂರು ವಿಶ್ವಕಪ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಅಜರುದ್ದೀನ್, ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ 15 ಸದಸ್ಯರ ತಂಡದ ಭಾಗವಾಗದಿರುವುದನ್ನು ನೋಡಿ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ಧೀನ್, "ಪ್ರಧಾನ ತಂಡದಿಂದ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟಿರುವುದು ಆಶ್ಚರ್ಯ ತಂದಿದೆ." ಎಂದಿದ್ದಾರೆ.

2021ರ ವಿಶ್ವಕಪ್ ಆದಮೇಲೆ ಮೊಹಮ್ಮದ್ ಶಮಿ ಕಡೆಗಣನೆ
2021 ರಲ್ಲಿ ಯುಎಇಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನದ ನಂತರ ಅನುಭವಿ ವೇಗಿ ಶಮಿ ಭಾರತೀಯ ಟಿ20 ತಂಡದಿಂದ ಹೊರಗುಳಿದಿದ್ದರು. 2021ರ ನಂತರ ಶಮಿ ಭಾರತದ ಪರವಾಗಿ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಆದರೆ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಅವರನ್ನು ಹೆಸರಿಸಲಾಗಿದೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಟಿ20 ಸರಣಿಗಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಆರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಜವಾಬ್ದಾರಿ ಶಮಿ ಮೇಲಿದೆ. ಮೊಹಮ್ಮದ್ ಶಮಿ ಇದುವರೆಗೆ 17 ಅಂತಾರಾಷ್ಟ್ರೀಯ ಟಿ20ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 9.54 ಎಕಾನಮಿ ದರದಲ್ಲಿ 18 ವಿಕೆಟ್ ಪಡೆದಿದ್ದಾರೆ.
ಒಂದು ವರ್ಷದ ಅಂತರ, ಐದು ಬದಲಾವಣೆ: ಕಳೆದ ವರ್ಷದ ವಿಶ್ವಕಪ್‌ಗಿಂತ ಬಲಿಷ್ಠವಾಗಿದೆಯಾ ಭಾರತ?

ಏಷ್ಯಾಕಪ್ ತಂಡದಿಂದಲೂ ಹೊರಗಿದ್ದ ಶಮಿ
ಜಸ್ಪ್ರಿತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯದ ಸಮಸ್ಯೆಯಿಂದ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದ ನಂತರವೂ ಏಷ್ಯಾಕಪ್‌ಗಾಗಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಮೊಹಮ್ಮದ್ ಶಮಿ ವಿಫಲರಾಗಿದ್ದರು.
ಯುವ ವೇಗಿಗಳಿಗೆ ಮಣೆ ಹಾಕಿದ್ದ ಬಿಸಿಸಿಐ ಆಯ್ಕೆದಾರರು ಶಮಿ ಅವರನ್ನು ಕೈ ಬಿಟ್ಟಿದ್ದರು. ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಅನುಭವಿ ವೇಗದ ಬೌಲರ್ ಕೊರತೆ ಬಹುವಾಗಿ ಕಾಡಿತ್ತು, ಉತ್ತಮ ಬೌಲಿಂಗ್ ಪ್ರದರ್ಶನ ನೀಡದ ಕಾರಣ ಭಾರತ ಸೋಲನುಭವಿಸಿ ಟೂರ್ನಿಯಿಂದಲೇ ಹೊರಬಿದ್ದಿತ್ತು. ಹಲವು ಮಾಜಿ ಆಟಗಾರರು, ಕ್ರಿಕೆಟ್ ಅಭಿಮಾನಿಗಳು ಶಮಿ ಆಯ್ಕೆ ಮಾಡದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ರನ್ ಗಳಿಸಲು ಪರದಾಡುತ್ತಿರುವ ಶ್ರೇಯಸ್ ಅಯ್ಯರ್
ಕಡಿಮೆ ಅವಕಾಶಗಳನ್ನು ಪಡೆದಿರುವ ಶ್ರೇಯಸ್ ಅಯ್ಯರ್ ಉತ್ತಮ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ ವಿದೇಶಿ ಬೌನ್ಸಿ ಪಿಚ್‌ಗಳಲ್ಲಿ ಶ್ರೇಯಸ್ ಅಯ್ಯರ್ ಸುಲಭವಾಗಿ ವಿಕೆಟ್ ಒಪ್ಪಿಸುತ್ತಿರುವುದು ಅವರನ್ನು 15 ಸದಸ್ಯರ ತಂಡದಲ್ಲಿ ಆಯ್ಕೆ ಮಾಡದೆ ಇರಲು ಕಾರಣ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಶ್ರೇಯಸ್ ಅಯ್ಯರ್, ಶಾರ್ಟ್ ಪಿಚ್ ಎಸೆತಕ್ಕೆ ಔಟಾಗಿದ್ದರು. ಕೆಕೆಆರ್ ತಂಡದ ಮಾಜಿ ಕೋಚ್ ಬ್ರೆಂಡನ್ ಮೆಕಲಂ, ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಔಟ್ ಮಾಡಲು ತಂತ್ರ ಹೆಣೆದಿದ್ದರು. ಪಕ್ಕೆಲುಬನ್ನು ಗುರಿಯಾಗಿಸಿ ಬೌಲಿಂಗ್ ಮಾಡಲು ಸಿಗ್ನಲ್ ಮೆಕಲಂ ಇಂಗ್ಲೆಂಡ್ ಬೌಲರ್ ಗಳಿಗೆ ಸನ್ನೆ ಮಾಡಿದ್ದರು, ನಂತರ ಕೆಲವೇ ಎಸೆತಗಳಲ್ಲಿ ಶ್ರೇಯಸ್ ಅಯ್ಯರ್ ಔಟ್ ಆಗಿದ್ದರು.

ಟಿ20 ವಿಶ್ವಕಪ್ 2022 ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ದೀಪಕ್ ಚಹಾರ್, ರವಿ ಬಿಷ್ಣೋಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications