BAN vs WI: ನಾಲ್ಕನೇ ದಿನಕ್ಕೆ ಮುಗಿಯಲಿದೆ ಮೊದಲ ಟೆಸ್ಟ್; ಗೆಲುವಿನ ಸನಿಹದಲ್ಲಿ ವಿಂಡೀಸ್

ಇತ್ತೀಚೆಗಷ್ಟೇ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡು ಎಲ್ಲಾ ಪಂದ್ಯಗಳಲ್ಲಿಯೂ ಸೋತು ವೈಟ್ ವಾಶ್ ಮುಖಭಂಗಕ್ಕೆ ಒಳಗಾಗಿದ್ದ ವೆಸ್ಟ್ ಇಂಡೀಸ್ ಇದೀಗ ತವರು ನೆಲದಲ್ಲಿ ಬಾಂಗ್ಲಾದೇಶದ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ, 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟ ನಡೆಸುತ್ತಿದೆ.
ಇತ್ತಂಡಗಳ ನಡುವೆ ಮೊದಲಿಗೆ ಟೆಸ್ಟ್ ಸರಣಿ ಆರಂಭವಾಗಿದ್ದು, ಪ್ರಥಮ ಪಂದ್ಯ ಜೂನ್ 16ರಿಂದ ಜೂನ್ 21ರವರೆಗೆ ಆಯೋಜನೆಗೊಂಡಿತ್ತು. ಆದರೆ ಈ ಪಂದ್ಯ ನಾಲ್ಕೇ ದಿನಕ್ಕೆ ಮುಕ್ತಾಯವಾಗುವ ಹಂತಕ್ಕೆ ಬಂದು ತಲುಪಿದ್ದು, ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ಸಾಧಿಸಲು 35 ರನ್‌ಗಳ ಅಗತ್ಯತೆ ಇದೆ.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 103 ರನ್‌ಗಳಿಗೆ ಆಲ್ ಔಟ್ ಆಗಿ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಗಿಸಿತು. ನಂತರ ವೆಸ್ಟ್ ಇಂಡೀಸ್ 265 ರನ್‌ಗಳಿಗೆ ಆಲ್ ಔಟ್ ಆಗಿ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 162 ರನ್‌ಗಳ ಮುನ್ನಡೆಯನ್ನು ಸಾಧಿಸಿತ್ತು.
ನಂತರ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 245 ರನ್ ಕಲೆಹಾಕಿ ಆಲ್ ಔಟ್ ಆಗಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 84 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ. ಇತ್ತ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿ ಪಂದ್ಯದ ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡಿರುವ ವೆಸ್ಟ್ ಇಂಡೀಸ್ 49 ರನ್ ಕಲೆಹಾಕಿದ್ದು, ಗೆಲ್ಲಲು ಇನ್ನೂ 35 ರನ್ ಬಾರಿಸಬೇಕಿದೆ. ಇನ್ನೂ 7 ವಿಕೆಟ್ ಕೈನಲ್ಲಿದ್ದು, ಜಾನ್ ಕ್ಯಾಂಪ್‌ಬೆಲ್ ಅಜೇಯ 28 ರನ್ ಮತ್ತು ಜರ್ಮೈನ್ ಬ್ಲ್ಯಾಕ್ ವುಡ್ ಅಜೇಯ 17 ರನ್ ಕಲೆಹಾಕಿದ್ದು ನೆಲಕಚ್ಚಿ ನಿಂತಿದ್ದಾರೆ. ಹೀಗೆ ಸುರಕ್ಷಿತ ಹಂತದಲ್ಲಿರುವ ವೆಸ್ಟ್ ಇಂಡೀಸ್ ಉಳಿದ ರನ್ ಕಲೆ ಹಾಕಿ ಪಂದ್ಯದಲ್ಲಿ ಸುಲಭ ಜಯ ಸಾಧಿಸಲಿದ್ದು, 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಳ್ಳುವುದು ಖಚಿತ.
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜಾನ್ ಕ್ಯಾಂಪ್‌ಬೆಲ್, ಎನ್ಕ್ರುಮಾ ಬೊನ್ನರ್, ರೇಮನ್ ರೀಫರ್, ಜೆರ್ಮೈನ್ ಬ್ಲಾಕ್‌ವುಡ್, ಕೈಲ್ ಮೇಯರ್ಸ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್, ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹೊಸೈನ್ ಶಾಂಟೊ, ಮೊಮಿನುಲ್ ಹಕ್, ಶಾಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್, ಎಬಾಡೋತ್ ಹೊಸೈನ್, ಖಲೀದ್ ಅಹ್ಮದ್, ಮುಸ್ತಫಿಜುರ್ ರೆಹಮಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications