ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಎರಡು ಪಂದ್ಯಗಳಿಗೆ ಸ್ಥಳ ವಿನಿಮಯಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸರ್ವಾನುಮತದಿಂದ ತಿರಸ್ಕರಿಸಿದೆ.
50 ಓವರ್‌ಗಳ ವಿಶ್ವಕಪ್ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ ನಡೆಯಲಿದೆ. ವರದಿಗಳ ಪ್ರಕಾರ, ಮಂಗಳವಾರ, ಜೂನ್ 20ರಂದು ಐಸಿಸಿ ಮತ್ತು ಬಿಸಿಸಿಐ ಸಭೆ ನಡೆಸಿದ್ದು, ತಮ್ಮ ನಿರ್ಧಾರದ ಬಗ್ಗೆ ಪಿಸಿಬಿಗೆ ಅಧಿಕೃತವಾಗಿ ತಿಳಿಸಲಾಗಿದೆ.

ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಕರಡು ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನ ತಂಡವು ಚೆನ್ನೈನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಅಫ್ಘಾನಿಸ್ತಾನವನ್ನು ಮತ್ತು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಆದರೆ, ಪಾಕಿಸ್ತಾನ ವಿಶ್ಲೇಷಕರ ಸ್ಥಳದ ದತ್ತಾಂಶ ಪರಿಶೀಲನೆಯ ನಂತರ, ಪಿಸಿಬಿ ಸ್ಥಳಗಳನ್ನು ವಿನಿಮಯ ಮಾಡಿಕೊಳ್ಳಲು ಇಚ್ಛೆ ವ್ಯಕ್ತಪಡಿಸಿತ್ತು.
ಚೆನ್ನೈನ ಪಿಚ್ ಆಗಾಗ್ಗೆ ಸ್ಪಿನ್ನರ್‌ಗಳಿಗೆ ಸಹಾಯ ಮಾಡಲಿದೆ ಮತ್ತು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳನ್ನು ಕ್ರಮವಾಗಿ ಚೆನ್ನೈ ಮತ್ತು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ವಿನಂತಿಸಿತ್ತು.
ಇನ್ನು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈ-ವೋಲ್ಟೇಜ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಿಸಿಬಿ ಮಾಜಿ ಮುಖ್ಯಸ್ಥ ನಜಮ್ ಸೇಥಿ ಅವರು ಇದರ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು, ಆದರೆ ಆ ವಿನಂತಿಯನ್ನು ಸಹ ತಿರಸ್ಕರಿಸಲಾಗಿತ್ತು.

ಕ್ರಿಕ್‌ಬಜ್ ವರದಿಯ ಪ್ರಕಾರ, ಎರಡೂ ಸ್ಥಳಗಳನ್ನು ಬದಲಾಯಿಸಲು ಯಾವುದೇ ಮಾನ್ಯ ಕಾರಣವಿಲ್ಲ ಎಂದು ಐಸಿಸಿ ಮತ್ತು ಬಿಸಿಸಿಐ ಹೇಳಿದೆ. ಗಮನಾರ್ಹವಾಗಿ, ಸ್ಥಳದ ಆಯ್ಕೆಯು ಪಂದ್ಯಾವಳಿ ಆಯೋಜಿಸುವವರ ಜವಾಬ್ದಾರಿಯಾಗಿದೆ ಮತ್ತು ಯಾವುದೇ ಬದಲಾವಣೆಯನ್ನು ಮಾಡಲು ಅವರಿಗೆ ಐಸಿಸಿ ಅನುಮತಿಯ ಅಗತ್ಯವಿದೆ. ಜೊತೆಗೆ ಭದ್ರತಾ ಸಮಸ್ಯೆಗಳಿದ್ದರೆ ಮಾತ್ರ ಸ್ಥಳ ಬದಲಾವಣೆಯನ್ನು ಪರಿಗಣಿಸಬಹುದು ಎಂದು ತಿಳಿಸಲಾಗಿದೆ.
2016ರ ಐಸಿಸಿ ಟಿ20 ವಿಶ್ವಕಪ್ ವೇಳೆ ಭಾರತ ಮತ್ತು ಪಾಕಿಸ್ತಾನ ಪಂದ್ಯ ಸ್ಥಳಾಂತರ
ಆದಾಗ್ಯೂ, ಹಿಂದಿನ ಪಂದ್ಯಾವಳಿಗಳಲ್ಲಿ ಸ್ಥಳ ಬದಲಾವಣೆಗಳು ನಡೆದ ಘಟನೆಗಳಿವೆ. ಭದ್ರತಾ ಕಾಳಜಿಯಿಂದಾಗಿ 2016ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ20 ವಿಶ್ವಕಪ್ ಪಂದ್ಯವನ್ನು ಧರ್ಮಶಾಲಾದಿಂದ ಕೋಲ್ಕತ್ತಾಗೆ ಸ್ಥಳಾಂತರಿಸಲಾಗಿತ್ತು.
ಕಾರ್ಯಾಚರಣೆ ವಿಷಯಗಳ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿದ ಸಭೆಯಲ್ಲಿ ಐಸಿಸಿ ಮತ್ತು ಬಿಸಿಸಿಐ ಸ್ಥಳ ವಿನಿಮಯ ತಿರಸ್ಕರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಬಿಸಿಸಿಐ ಮತ್ತು ಐಸಿಸಿಗಳು ಈವರೆಗೆ ವಿಶ್ವಕಪ್ ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ.
ಕೆಲವು ವರದಿಗಳ ಪ್ರಕಾರ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಾವಳಿಯ ಮೊದಲ ಪಂದ್ಯವು ಅಕ್ಟೋಬರ್ 5ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.