IND vs AUS 2nd Test: ಸ್ಟಾರ್ ಬ್ಯಾಟರ್ ವಾಪಸ್, ಸೂರ್ಯಕುಮಾರ್‌ಗೆ ಕೋಕ್?; ಕೋಚ್ ದ್ರಾವಿಡ್ ಹೇಳಿದ್ದೇನು?

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರ, ಫೆಬ್ರವರಿ 17ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯವನ್ನು ಅತಿಥೇಯ ಭಾರತ ತಂಡ ಪ್ರವಾಸಿ ತಂಡದ ವಿರುದ್ಧ ಇನ್ನಿಂಗ್ಸ್ ಹಾಗೂ 132 ರನ್‌ಗಳ ಭರ್ಜರಿ ಜಯ ಸಾಧಿಸಿ, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಇನ್ನು ಎರಡನೇ ಪಂದ್ಯಕ್ಕೆ ಭಾರತ ತಂಡಕ್ಕೆ ಬ್ಯಾಟಿಂಗ್ ಬಲ ಹೆಚ್ಚಿಸುವ ಸುದ್ದಿಯೊಂದು ಹೊರಬಿದ್ದಿದೆ. ಭಾರತದ ಮಧ್ಯಮ ಕ್ರಮಾಂಕದ ನಂಬಿಕಸ್ಥ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ವಾಪಸ್ಸಾಗಿದ್ದಾರೆ.
ಬೆನ್ನುನೋವಿನ ಕಾರಣ ಶ್ರೇಯಸ್ ಅಯ್ಯರ್ ಕಳೆದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ನಂತರ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ತರಬೇತಿ ಅವಧಿ ಪೂರ್ಣಗೊಳಿಸಿ, ಆಡಲು ಫಿಟ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೈಕೊಡುತ್ತಿರುವ ಬ್ಯಾಟಿಂಗ್‌ನಿಂದಾಗಿ ಶ್ರೇಯಸ್ ಅಯ್ಯರ್ ಸೇರ್ಪಡೆ ಭಾರತಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ.

ಅಯ್ಯರ್ ನೇರವಾಗಿ ಆಡುವ 11ರ ಬಳಗಕ್ಕೆ ಪ್ರವೇಶಿಸುತ್ತಾರೆ
ಶ್ರೇಯಸ್ ಅಯ್ಯರ್ ಅವರು ಎನ್‌ಸಿಎನ ತರಬೇತಿಯಲ್ಲಿ ತಮ್ಮ ಫಿಟ್‌ನೆಸ್ ಅನ್ನು ಸಾಬೀತುಪಡಿಸಿದರೆ ನೇರವಾಗಿ ಆಡುವ 11ರ ಬಳಗಕ್ಕೆ ಪ್ರವೇಶಿಸುತ್ತಾರೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ.
"ಶ್ರೇಯಸ್ ಅಯ್ಯರ್ ಮೊದಲ ಪೂರ್ಣ ಪ್ರಮಾಣದ ತರಬೇತಿ ಅವಧಿಯಲ್ಲಿ ಹಲವು ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದರು ಮತ್ತು ಗುರುವಾರ ಮತ್ತೆ ಬ್ಯಾಟ್ ಮಾಡಲಿದ್ದಾರೆ. ಐದು ದಿನಗಳ ಒತ್ತಡ ಸಹಿಸಿಕೊಳ್ಳಲು ಸಿದ್ಧ ಎಂದು ತಂಡದ ಮ್ಯಾನೇಜ್‌ಮೆಂಟ್ ಭಾವಿಸಿದರೆ, ಅಯ್ಯರ್ ತಕ್ಷಣವೇ ನೇರವಾಗಿ ತಂಡವನ್ನು ಕೂಡಿಕೊಳ್ಳಲಿದ್ದಾರೆ," ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ಶ್ರೇಯಸ್ ಅಯ್ಯರ್ ವಾಪಸಾತಿಯಿಂದಾಗಿ ಸೂರ್ಯಕುಮಾರ್ ಸ್ಥಾನಕ್ಕೆ ಕುತ್ತು
ಒಂದು ಕಡೆ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಮರಳುತ್ತಿರುವುದು ಸಿಹಿ ಸುದ್ದಿಯಾದರೆ, ಮತ್ತೊಂದೆಡೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್‌ಗೆ ಇದು ಕೆಟ್ಟ ಸುದ್ದಿಯಾಗಲಿದೆ.
ಸೂರ್ಯಕುಮಾರ್ ಯಾದವ್ ತನ್ನ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಎಂಟು ರನ್‌ಗಳಿಗೆ ಔಟಾಗಿದ್ದರು. ಇದೀಗ ಶ್ರೇಯಸ್ ಅಯ್ಯರ್ ವಾಪಸಾತಿಯಿಂದಾಗಿ ಸೂರ್ಯಕುಮಾರ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಶ್ರೇಯಸ್ ಅಯ್ಯರ್ ಕೊಡುಗೆಯನ್ನು ತಂಡವು ಗೌರವಿಸುತ್ತದೆ
"ಗಾಯದಿಂದ ಚೇತರಿಸಿಕೊಂಡು ಆಡಲು ಸಿದ್ಧವಾಗಿರುವ ಮತ್ತು ಹಿಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಕೊಡುಗೆಯನ್ನು ತಂಡವು ಗೌರವಿಸುತ್ತದೆ," ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಕಳೆದ ಒಂದೂವರೆ ವರ್ಷಗಳಲ್ಲಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದು, ನವೆಂಬರ್ 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪದಾರ್ಪಣೆ ಮಾಡಿದಾಗಿನಿಂದ ತಂಡಕ್ಕೆ ರನ್ ಗಳಿಸುತ್ತಲೇ ಬಂದಿದ್ದಾರೆ. ಶ್ರೇಯಸ್ ಅಯ್ಯರ್ ಆಡಿದ 7 ಟೆಸ್ಟ್ ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 624 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications