ಕರಾಚಿಯಲ್ಲಿ ವಾಸೀಂ ಅಕ್ರಂ ಕಾರಿನ ಮೇಲೆ ಗುಂಡಿನ ದಾಳಿ
ಕರಾಚಿ, ಆಗಸ್ಟ್ 05: ಪಾಕಿಸ್ತಾನದ ಮಾಜಿ ಕ್ರಿಕೆಟರ್ ವಾಸೀಂ ಅಕ್ರಂ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಬುಧವಾರ ಸಂಭವಿಸಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ವಾಸೀಂ ಅವರು ಈಗ ಸುರಕ್ಷಿತರಾಗಿದ್ದಾರೆ.
ಕರಾಚಿಯ ರಾಷ್ಟ್ರೀಯ ಮೈದಾನದ ಬಳಿ ವಾಸೀಂ ಅಕ್ರಂ ಅವರು ಕಾರಿನಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮುಸುಕುಧಾರಿ ವ್ಯಕ್ತಿಗಳು ವಾಸೀಂ ಅವರಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದಾರೆ.

ಸ್ಟೇಡಿಯಂನಲ್ಲಿ ಪಾಕಿಸ್ತಾನಿ ಬೌಲರ್ ಗಳಿಗೆ ತರಬೇತಿ ನೀಡಲು ಹೋಗುತ್ತಿದ್ದ ವಾಸೀಂ ಅವರು ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.[ತೆಂಡೂಲ್ಕರ್ ಪುತ್ರನ ಬಗ್ಗೆ ವಾಸೀಂ ಅಕ್ರಂ ಹೇಳಿದ್ದೇನು]
ದುಷ್ಕರ್ಮಿಗಳು ಹೊಡೆದ ಗುಂಡು ವಾಸೀಂ ಅವರ ಕಾರಿನ ಟೈರ್ ಹಾಗೂ ನೇಮ್ ಪ್ಲೇಟಿಗೆ ತಗುಲಿದೆ. ಇಂಥ ಸಂದರ್ಭದಲ್ಲೂ ಅಕ್ರಂ ಅವರು ದಾಳಿಕೋರರ ವಾಹನದ ಸಂಖ್ಯೆಯನ್ನು ನೋಡಿ ನೆನಪಿಟ್ಟುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
'ನಾನು ಕ್ರಿಕೆಟ್ ಸ್ಟೇಡಿಯಂಗೆ ಹೋಗುತ್ತಿದ್ದೆ. ಬೈಕಿನಲ್ಲಿ ಬಂದವರು ನನ್ನ ಕಾರಿಗೆ ಗುದ್ದಿದ್ದಲ್ಲದೆ ಗುಂಡು ಹಾರಿಸಿದರು, ಕಾರಿನ ಟೈರಿಗೆ ಗುಂಡು ಬಡಿಯಿತು. ನಾನು ಸೇಫ್ ಆಗಿದ್ದೇನೆ' ಎಂದು ಜಿಯೋಟಿವಿಗೆ ವಾಸೀಂ ಅಕ್ರಂ ಪ್ರತಿಕ್ರಿಯಿಸಿದ್ದಾರೆ..
ಪಾಕಿಸ್ತಾನದ ಯುವ ಕ್ರಿಕೆಟರ್ಸ್ ಗಳಿಗೆ ತರಬೇತಿ ನೀಡುವಂತೆ ಮಾಜಿ ಕ್ರಿಕೆಟರ್ ವಾಸೀಂ ಅಕ್ರಂ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಕೇಳಿಕೊಂಡಿತ್ತು. ಇದಕ್ಕೆ ಒಪ್ಪಿದ್ದ ಅಕ್ರಂ ಅವರು ಕರಾಚಿ ಸ್ಟೇಡಿಯಂನಲ್ಲಿ ತರಬೇತಿ ಶಿಬಿರ ಆರಂಭಿಸಿದ್ದರು.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಬೌಲಿಂಗ್ ಕೋಚ್ ಹಾಗೂ ಕ್ರಿಕೆಟ್ ಪಂದ್ಯಗಳಿಗೆ ಕಾಮೆಂಟೇಟರ್ ಆಗಿ ಕೂಡಾ ವಾಸೀಂ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications