
ಬೆಂಗಳೂರು, ಜೂನ್ 20: ಚೆಂಡು ವಿರೂಪ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂಡಿಮಾಲ್ ಅವರಿಗೆ ಒಂದು ಟೆಸ್ಟ್ ಪಂದ್ಯದಿಂದ ನಿಷೇಧ ಹೇರಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಚಂಡಿಮಾಲ್ ಆಡುವಂತಿಲ್ಲ.
ವೆಸ್ಟ್ ಇಂಡೀಸ್‌ನ ಗ್ರಾಸ್ ಇಸ್ಲೆಟ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಳಿಯ ಎರಡನೆಯ ಪಂದ್ಯದ ಎರಡನೆಯ ದಿನ ಚೆಂಡಿನ ಗತಿಯನ್ನು ಬದಲಿಸಲು ಚಂಡಿಮಾಲ್ ಅವರು ಬಾಲ್‌ಗೆ ಸಿಹಿ ಪದಾರ್ಥವನ್ನು ಅಂಟಿಸಿದ್ದರು.
ಚಂಡಿಮಾಲ್ ಅವರ ವರ್ತನೆಯಿಂದ ಅನುಮಾನಗೊಂಡ ಅಂಪೈರ್‌ಗಳು ಆಟದ ವಿಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ಚಂಡಿಮಾಲ್ ಅವರು ಚೆಂಡು ವಿರೂಪಗೊಳಿಸಿದ್ದು ಪತ್ತೆಯಾಗಿತ್ತು.
ಇದು ತೀವ್ರ ಗೊಂದಲಕ್ಕೆ ಕಾರಣವಾಗಿತ್ತು. ಬೇರೆ ಚೆಂಡಿನೊಂದಿಗೆ ಆಟ ಆರಂಭಿಸುವ ಅಂಪೈರ್‌ಗಳ ನಿರ್ಧಾರ ವಿರೋಧಿಸಿ ಶ್ರೀಲಂಕಾ ಆಟಗಾರರು ಮೈದಾನಕ್ಕೆ ಇಳಿದಿರಲಿಲ್ಲ. ಆದರೆ, ಕಠಿಣ ಎಚ್ಚರಿಕೆ ಬಳಿಕ ಎರಡು ಗಂಟೆ ತಡವಾಗಿ ಅವರು ಫೀಲ್ಡಿಂಗ್‌ಗೆ ಇಳಿದಿದ್ದರು.
ಆರಂಭದಲ್ಲಿ ಆರೋಪ ನಿರಾಕರಿಸಿದ್ದ ಚಂಡಿಮಾಲ್, ಮಂಗವಾರ ಟೆಸ್ಟ್ ಪಂದ್ಯ ಮುಗಿದ ಬಳಿಕ ಶ್ರೀಲಂಕಾ ತಂಡ ಮ್ಯಾನೇಜ್ಮೆಂಟ್, ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್ ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ವಿಡಿಯೋ ಪುರಾವೆ ತೋರಿಸಿದ ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಆದರೆ, ತಮ್ಮ ಬಾಯಿಯಿಂದ ಹೊರಕ್ಕೆ ತೆಗೆದು ಅಂಟಿಸಿದ ಪದಾರ್ಥ ಯಾವುದು ಎಂಬುದು ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಐಸಿಸಿ ನಿಯಮಾವಳಿಗಳ ಅಡಿಯಲ್ಲಿ ಗರಿಷ್ಠ ಶಿಕ್ಷೆಯನ್ನು ವಿಧಿಸುವ ಅಧಿಕಾರದಡಿ ಜಾವಗಲ್ ಶ್ರೀನಾಥ್ ಅವರು ಚಂಡಿಮಾಲ್‌ಗೆ ಎರಡು ಅಮಾನತು ಪಾಯಿಂಟ್ ಮತ್ತು ಪಂದ್ಯದ ಆದಾಯದ ಶೇ 100ರಷ್ಟು ದಂಡವನ್ನು ವಿಧಿಸಿದರು.
ಎರಡು ಅಮಾನತು ಪಾಯಿಂಟ್ ಆಟಗಾರ ಮೊದಲು ಆಡಲಿರುವ ಪಂದ್ಯಗಳಿಗೆ ಅನುಗುಣವಾಗಿ ಅನ್ವಯವಾಗುತ್ತದೆ. ಎರಡು ಪಾಯಿಂಟ್ ಕಡಿತವಾದರೆ ಒಂದು ಟೆಸ್ಟ್ ಪಂದ್ಯ, ಎರಡು ಏಕದಿನ ಅಥವಾ ಎರಡು ಟಿ 20 ಪಂದ್ಯಗಳಿಂದ ಅಮಾನತು ಮಾಡಲಾಗುತ್ತದೆ.
ಹೀಗಾಗಿ ಜೂನ್ 23ರಿಂದ ಬಾರ್ಬಡೋಸ್‌ನಲ್ಲಿ ಪ್ರಾರಂಭವಾಗಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಚಂಡಿಮಾಲ್ ಆಡುವಂತಿಲ್ಲ.
ಎರಡು ಅಮಾನತಿನ ಪಾಯಿಂಟ್‌ಗಳ ಜತೆಗೆ ಅಶಿಸ್ತಿನ ವರ್ತನೆಯ ಕಾರಣಕ್ಕೆ ಎರಡು ಹೆಚ್ಚುವರಿ ಪಾಯಿಂಟ್‌ಗಳೂ ಚಂಡಿಮಾಲ್ ಅವರ ವಿರುದ್ಧ ದಾಖಲಾಗಿದೆ.
ವಿಡಿಯೋ ದೃಶ್ಯಾವಳಿ ವೀಕ್ಷಿಸಿದ ಬಳಿಕ ಚಂಡಿಮಾಲ್ ಅವರು ಚೆಂಡಿಗೆ ಪದಾರ್ಥವೊಂದನ್ನು ಅಂಟಿಸಿದ್ದು ದೃಢಪಟ್ಟಿದೆ. ಈ ಪದಾರ್ಥವು ಐಸಿಸಿ ನೀತಿ ಸಂಹಿತೆಯಲ್ಲಿ ನಿಷೇಧಕ್ಕೆ ಒಳಗಾಗಿದೆ ಎಂದು ಜಾವಗಲ್ ಶ್ರೀನಾಥ್ ತಿಳಿಸಿದ್ದಾರೆ.
ಇದಲ್ಲದೆ, ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್ ಅವರು ತಂಡದ ಆಟಗಾರರು ಮೈದಾನಕ್ಕೆ ಇಳಿಯಲು ನಿರಾಕರಿಸುವ ಮೂಲಕ 2.3.1 ನಿಯಮದಡಿ 3 ಹಂತದ ಅಪರಾಧ ಎಸಗಿರುವುದಕ್ಕೆ ದಿನೇಶ್ ಚಂಡಿಮಾಲ್, ಶ್ರೀಲಂಕಾ ಕೋಚ್ ಚಂಡಿಕಾ ಹತುರಸಿಂಘೆ ಮತ್ತು ವ್ಯವಸ್ಥಾಪಕ ಅಸಾಂಕಾ ಗುರುಸಿನ್ಹಾ ಅವರ ವಿರುದ್ಧ ಆರೋಪ ದಾಖಲಿಸಿದ್ದಾರೆ.
ಈ ಮೂವರಲ್ಲಿ ಯಾರಾದರೂ ತಪ್ಪು ಒಪ್ಪಿಕೊಳ್ಳದೆ ಇದ್ದರೆ ನೀತಿ ಸಂಹಿತೆಯ 5.2ರ ನಿಯಮದಂತೆ ಐಸಿಸಿಯು ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಲು ತನ್ನ ನೀತಿ ಸಂಹಿತೆ ಆಯೋಗದಿಂದ ಒಬ್ಬ ನ್ಯಾಯಾಂಗ ಆಯುಕ್ತರನ್ನು ನೇಮಿಸಲಿದೆ.