

ಬೆಂಗಳೂರು, ಜೂನ್ 23: ಚೆಂಡು ವಿರೂಪ ಪ್ರಕರಣದಲ್ಲಿ ತಮಗೆ ವಿಧಿಸಲಾದ ಶಿಕ್ಷೆಯನ್ನು ಪ್ರಶ್ನಿಸಿ ಶ್ರೀಲಂಕಾ ನಾಯಕ ದಿನೇಶ್ ಚಂಡಿಮಾಲ್ ಸಲ್ಲಿಸಿದ್ದ ಅರ್ಜಿಯನ್ನು ಐಸಿಸಿಯಿಂದ ನೇಮಕವಾದ ಜ್ಯುಡಿಷಿಯಲ್ ಕಮಿಷನರ್ ಮಿಖಾಯೆಲ್ ಬೆಲೊಫ್ ತಿರಸ್ಕರಿಸಿದ್ದಾರೆ.
ಇದರಿಂದ ವೆಸ್ಟ್ ಇಂಡೀಸ್ ವಿರುದ್ಧ ಶನಿವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಚಂಡಿಮಾಲ್ ಆಡುವಂತಿಲ್ಲ.
ಎರಡನೆಯ ಟೆಸ್ಟ್ ಪಂದ್ಯದ ಎರಡನೆಯ ದಿನದಾಟದ ವೇಳೆ ಚೆಂಡನ್ನು ವಿರೂಪಗೊಳಿಸಿದ ಆರೋಪದಲ್ಲಿ ಚಂಡಿಮಾಲ್ ಅವರು ತಪ್ಪಿತಸ್ಥರು ಎಂಬುದು ಸಾಬೀತಾಗಿತ್ತು.
ಚಂಡಿಮಾಲ್ ಐಸಿಸಿ ಸ್ಟ್ಯಾಂಡರ್ಡ್ ಟೆಸ್ಟ್ ಮ್ಯಾಚ್ ಪ್ಲೇಯಿಂಗ್ ಕಂಡೀಷನ್ಸ್‌ನ 41.3ನೇ ನಿಯಮವನ್ನು ನೇರವಾಗಿ ಉಲ್ಲಂಘಿಸಿದರು. ಚಂಡಿಮಾಲ್ ಅವರು ಚೆಂಡಿಗೆ ಸಿಹಿ ಪದಾರ್ಥವನ್ನು ಅಂಟಿಸುವುದು ವಿಡಿಯೋ ಫೂಟೇಜ್‌ಗಳ ಮೂಲಕ ದೃಢಪಟ್ಟಿದ್ದರಿಂದ ರೆಫರಿ ಜಾವಗಲ್ ಶ್ರೀನಾಥ್ ಅವರು ಒಂದು ಟೆಸ್ಟ್ ಪಂದ್ಯ ನಿಷೇಧ ಮತ್ತು ಪಂದ್ಯದ ಶೇ 100ರಷ್ಟು ಶುಲ್ಕ ದಂಡವನ್ನು ವಿಧಿಸಿದ್ದರು.
ಇದನ್ನು ಚಂಡಿಮಾಲ್ ಐಸಿಸಿಯಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದ ವಿಚಾರಣೆಗಾಗಿ ಐಸಿಸಿ ಜ್ಯುಡಿಷಯಲ್ ಕಮಿಷನರ್ ಆಗಿ ಮಿಖಾಯೆಲ್ ಬೆಲೊಫ್ ಅವರನ್ನು ನೇಮಿಸಿತ್ತು.
ಇದಲ್ಲದೆ, ಮೂರನೇ ದಿನದ ಆಟದ ವೇಳೆ ಬೆಳಿಗ್ಗೆ ಮೈದಾನಕ್ಕೆ ಇಳಿಯಲು ನಿರಾಕರಿಸಿದ್ದಕ್ಕೆ ಮತ್ತು ಎರಡು ಗಂಟೆ ವಿಳಂಬವಾಗಿ ಆಟ ಆರಂಭಿಸಿದ್ದಕ್ಕೂ ಚಂಡಿಮಾಲ್, ತಂಡದ ಕೋಚ್ ಚಂಡಿಕಾ ಹತುರಸಿಂಘ ಮತ್ತು ಮ್ಯಾನೇಜರ್ ಅಸಾಂಕ ಗುರುಸಿನ್ಹಾ ಅವರ ಮೇಲೆ 3ನೇ ಮಟ್ಟದ ಆರೋಪ ಹೊರಿಸಲಾಗಿದೆ.
ಜುಲೈ 10ರಂದು ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಯಲಿದೆ. ಒಂದು ವೇಳೆ ಇದರಲ್ಲಿ ಚಂಡಿಮಾಲ್ ತಪ್ಪಿರಸ್ಥರು ಎಂಬುದು ಸಾಬೀತಾದರೆ ಅವರು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ.
ಆದರೆ, ವಿಚಾರಣೆ ನಡೆಯಲು ಇನ್ನೂ ಸಮಯ ಇರುವುದರಿಂದ ಹರುತಸಿಂಘ ಮತ್ತು ಗುರುಸಿನ್ಹಾ ಅವರು ಸದ್ಯಕ್ಕೆ ತಮ್ಮ ಹೊಣೆಗಾರಿಕೆಯನ್ನು ಮುಂದುವರಿಸಲು ಅಡ್ಡಿ ಇಲ್ಲ ಎಂದು ಬೆಲೊಫ್ ಹೇಳಿದ್ದಾರೆ.
ಚಂಡಿಮಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ಬೆಲೊಫ್, ಸತತ ನಾಲ್ಕು ಗಂಟೆ ಕಾಲ ಚಂಡಿಮಾಲ್ ಹಾಗೂ ಐಸಿಸಿಯ ವಾದ-ವಿವಾದಗಳನ್ನು ಆಲಿಸಿದರು.
ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಹಿರಿಯ ಆಟಗಾರ ರಂಗನಾ ಹೆರಾತ್ ಆಡುವುದು ಅನುಮಾನವಾಗಿರುವುದರಿಂದ ವೇಗದ ಬೌಲರ್ ಸುರಂಗಾ ಲಕ್ಮಲ್ ಅವರಿಗೆ ತಂಡದ ನೇತೃತ್ವ ವಹಿಸುವ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.
ಮೂರು ಟೆಸ್ಟ್‌ಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ಜಯಿಸಿತ್ತು. ಎರಡನೆಯ ಪಂದ್ಯ ವಿವಾದಗಳ ನಡುವೆ ಡ್ರಾದಲ್ಲಿ ಅಂತ್ಯಗೊಂಡಿತ್ತು.