ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲಾ ತಂಡಗಳು ಮುಂಬರುವ ಐಸಿಸಿ ಟೂರ್ನಿಗಳಿಗೆ ತಯಾರಿ ನಡೆಸುತ್ತಿವೆ. ಇತ್ತ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಕೋಲಾಹಲ ಎದ್ದಿದೆ. ಮಂಗಳವಾರ ತಡರಾತ್ರಿ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ನಾಯಕತ್ವವನ್ನು ತೊರೆದಿದ್ದಾರೆ.
ಇದೀಗ ಬುಧವಾರ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಹೊಸ ನಾಯಕನ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆ ಕೆಲ ದಿನಗಳ ಕಾಲ ಪಾಕಿಸ್ತಾನ ತಂಡದ ನಾಯಕರಾಗಿದ್ದ ವೇಗದ ಬೌಲರ್ ಶಾಹೀನ್ ಅಫ್ರಿದಿ ಹೆಸರು ಮತ್ತೆ ಕೇಳಿ ಬರುತ್ತಿತ್ತು. ಜೊತೆಗೆ ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಕೂಡ ನಾಯಕನ ರೇಸ್‌ನಲ್ಲಿದ್ದಾರೆ.

ಬ್ಯಾಟಿಂಗ್‌ನತ್ತ ಗಮನ ಹರಿಸಲು ಪಾಕಿಸ್ತಾನ ತಂಡದ ನಾಯಕತ್ವ ತೊರೆಯುತ್ತಿದ್ದೇನೆ ಎಂದು ಬಾಬರ್ ಅಜಮ್ ಕಾರಣವನ್ನು ತಿಳಿಸಿದ್ದಾರೆ. ಪಾಕಿಸ್ತಾನ ತಂಡದ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್ ಅವರ ಮನವೊಲಿಕೆಯ ಹೊರತಾಗಿಯೂ, ಬಾಬರ್ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಇದರಿಂದ ಪಾಕಿಸ್ತಾನ ತಂಡದ ಮುಂದಿನ ನಾಯಕ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೊಹಮ್ಮದ್ ರಿಜ್ವಾನ್ ತಂಡದ ನಾಯಕತ್ವವನ್ನು ವಹಿಸುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ ಶಾಹೀನ್ ಅಫ್ರಿದಿ ನಾಯಕನ ರೇಸ್‌ನಲ್ಲಿ ಹಿಂದೆ ಉಳಿಯಬಹುದು ಎನ್ನಲಾಗುತ್ತಿದೆ.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಮೊಹಮ್ಮದ್ ರಿಜ್ವಾನ್ ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಶಾಹೀನ್ ಅಫ್ರಿದಿ ಕೆಲವೇ ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು. ಆದರೆ ಅವರ ನಾಯಕತ್ವದಲ್ಲಿ ಪಾಕಿಸ್ತಾನದ ಪ್ರದರ್ಶನವು ಹೇಳಿಕೊಳ್ಳುವಂತಿರಲಿಲ್ಲ. ಇದಾದ ಬಳಿಕ ಬಾಬರ್ ಮತ್ತೊಮ್ಮೆ ಟಿ 20 ವಿಶ್ವಕಪ್‌ನಲ್ಲಿ ನಾಯಕರಾದರು. 2023ರ ಏಕದಿನ ವಿಶ್ವಕಪ್ ಬಳಿಕವೂ ಬಾಬರ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಶಾಹೀನ್ ಅಫ್ರಿದಿ ಅವರನ್ನು ನಾಯಕನ್ನಾಗಿ ಮಾಡಲಾಗಿತ್ತು. ಇದೇ ನಾಯಕತ್ವದ ವಿಚಾರವಾಗಿ ಬಾಬರ್ ಮತ್ತು ಶಾಹೀನ್ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು.
ಹಲವು ದಿನಗಳಿಂದ ಪಾಕಿಸ್ತಾನ ತಂಡದಲ್ಲಿನ ಗುಂಪುಗಾರಿಕೆ ದೂರುಗಳು ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಪಿಸಿಬಿ ಕೂಡ ಕ್ರಮ ಕೈಗೊಂಡಿದೆ. ಇದರ ಮಧ್ಯೆಯೂ ಪಾಕಿಸ್ತಾನ ತಂಡದಲ್ಲಿ ಬಾಬರ್, ಶಾಹೀನ್ ಮತ್ತು ರಿಜ್ವಾನ್ ಅವರ ವಿವಿಧ ಗುಂಪುಗಳಾಗಿ ಇರುವಂತೆ ಕಾಣಿಸುತ್ತಿದೆ. ಈಗ ರಿಜ್ವಾನ್ ಅವರಿಗೆ ನಾಯಕತ್ವ ನೀಡಿದರೆ ಮತ್ತೆ ಸ್ನೇಹದಲ್ಲಿ ಬಿರುಕು ಮೂಡುತ್ತದೆಯೇ ಎಂಬುದು ಕ್ರಿಕೆಟ್ ಗಲ್ಲಿಯಲ್ಲಿ ಚರ್ಚೆ ಶುರುವಾಗಿದೆ.
ಶಾಹೀನ್ ಅಫ್ರಿದಿ ಅವರಿಗೆ ಹೋಲಿಸಿದರೆ ರಿಜ್ವಾನ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಪಾಕಿಸ್ತಾನ ಪರ ಇದುವರೆಗೆ ಅವರು 74 ಏಕದಿನ ಮತ್ತು 102 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ ಎರಡೂ ಮಾದರಿ ಕ್ರಿಕೆಟ್‌ನಲ್ಲಿ 2088 ಮತ್ತು 3313 ರನ್ ಗಳಿಸಿದ್ದಾರೆ.