ಝಿಂಟಾ-ಸೆಹ್ವಾಗ್ ವಿವಾದ: ಅಸಲಿಗೆ ಏನಾಗಿದೆ ಇಬ್ಬರ ಮಧ್ಯೆ?

ನವದೆಹಲಿ, ಮೇ 11: ರಾಜಸ್ಥಾನ್ ಮತ್ತು ಪಂಜಾಬ್ ತಂಡಗಳ ಮಧ್ಯೆ ನಡೆದಿದ್ದ ಐಪಿಎಲ್ ಪಂದ್ಯದ ವಿಚಾರವಾಗಿ ಪಂಜಾಬ್ ಸಹ ಮಾಲಕಿ ಪ್ರೀತಿ ಝಿಂಟಾ ಮತ್ತು ಮೆಂಟರ್ ವೀರೇಂದ್ರ ಸೆಹ್ವಾಗ್ ನಡುವೆ ಮುನಿಸಾಗಿದೆ ಎಂಬ ವಿಚಾರವನ್ನು ಪ್ರೀತಿ ಝಿಂಟಾ ತಳ್ಳಿ ಹಾಕಿದ್ದಾರೆ.
ಮಂಗಳವಾರ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರಾಜಸ್ಥಾನ್ ಎದುರು 15 ರನ್ನುಗಳಿಂದ ಸೋತಿತ್ತು. ಈ ಸಂದರ್ಭ ಪಂಜಾಬ್ ಬ್ಯಾಟಿಂಗ್ ಕ್ರಮಾಂಕದ ವಿಚಾರವಾಗಿ ಝಿಂಟಾ-ಸೆಹ್ವಾಗ್ ಮಧ್ಯೆ ಗಲಾಟೆಯಾಗಿತ್ತು ಎನ್ನಲಾಗಿತ್ತು.
ಮೇ 8ರಂದು ನಡೆದಿದ್ದ ರಾಜಸ್ಥಾನ್-ಪಂಜಾಬ್ ತಂಡಗಳ ನಡುವಿನ ಐಪಿಎಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದು 158 ರನ್ ಪೇರಿಸಿ ಪಂಜಾಬ್ ಗೆ 159 ರನ್ ಟಾರ್ಗೆಟ್ ನೀಡಿತ್ತು. ಆದರೆ ಚೇಸಿಂಗ್ ಗಿಳಿದ ಪಂಜಾಬ್ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು.
ಪಂಜಾಬ್ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆಯಾಗಿತ್ತು. ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಹಾಗೂ ಮನೋಜ್ ತಿವಾರಿ ಬದಲು ನಾಯಕ ಅಶ್ವಿನ್ ಬ್ಯಾಟಿಂಗ್ ಗೆ ಇಳಿದಿದ್ದರು. ಆದರೆ ಅಶ್ವಿನ್ ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದ್ದರು. ಇದೇ ವಿಚಾರವಾಗಿ ಪಂದ್ಯ ಮುಗಿದ ಬಳಿಕ ಪ್ರೀತಿ ಅವರು ಸೆಹ್ವಾಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೋರು ಧ್ವನಿಯಲ್ಲಿ ಸೆಹ್ವಾಗ್ ಅವರೊಂದಿಗೆ ಮಾತನಾಡಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಬಳಿಕ ಪ್ರತಿಕ್ರಿಯಿಸಿರುವ ಪ್ರೀತಿ, 'ಇವೆಲ್ಲ ಸುಳ್ಳು. ನಾನು ಬ್ಯಾಟಿಂಗ್ ಕ್ರಮಾಂಕದ ವಿಚಾರವಾಗಿ ಸ್ವಲ್ಪ ದೊಡ್ಡ ಧ್ವನಿಯಲ್ಲಿ ಸೆಹ್ವಾಗ್ ಅವರೊಂದಿಗೆ ಮಾತನಾಡಿದ್ದೆನಷ್ಟೇ. ಆದರೆ ಮಾಧ್ಯಮಗಳು ಸುಮ್ಮನಾದರೂ ಆ ವಿಚಾರವನ್ನು ದೊಡ್ಡದು ಮಾಡಿದವು. ನಮ್ಮಿಬ್ಬರ ಮಧ್ಯೆ ಅಂಥ ಮುನಿಸೇನೂ ಇಲ್ಲ' ಎಂದಿದ್ದಾರೆ.
ಪಂಜಾಬ್ ಸೋತ ಬಳಿಕ, 'ಸರಿಯಾದ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲವಾಗಿದ್ದೀರ' ಎಂದು ಸೆಹ್ವಾಗ್ ಎದುರು ಪ್ರೀತಿ ಕೂಗಾಡಿದ್ದರು. ಆ ಸಂದರ್ಭ ಸಮಾಧಾನವಾಗಿಯೇ ವರ್ತಿಸಿದ ಸೆಹ್ವಾಗ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.
ಈ ಘಟನೆಯ ಬಳಿಕ ಪ್ರೀತಿ ಜಿಂಟಾ, ನೆಸ್ ವಾಡಿಯಾ ಹಾಗೂ ಉದ್ಯಮಿ ಮೋಹಿತ್ ಬುರ್ಮಾನ್ ಸಹ ಒಡೆತನದ ಪ್ರಾಂಚೈಸಿಯೊಂದಿಗೆ ಸೆಹ್ವಾಗ್ ತಂಡದ ಮೆಂಟರ್ ಸ್ಥಾನದಿಂದ ಸೆಹ್ವಾಗ್ ಹೊರಬರಲಿದ್ದಾರೆ ಎನ್ನುವ ವಿಚಾರವೂ ಸುದ್ದಿಯಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications