ಶುಕ್ರವಾರ, ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಮಾಡಿತು.
ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸತತ ಮೂರನೇ ಪಂದ್ಯವನ್ನು ಸೋತ ನಂತರ ಸಿಎಸ್‌ಕೆ ನಾಯಕ ಎಂಎಸ್ ಧೋನಿ ತಮ್ಮ ತಂಡದ ಬ್ಯಾಟರ್‌ಗಳ ಬಗ್ಗೆ ಸಂತೋಷವಾಗಿರಲಿಲ್ಲ.

ಇದಕ್ಕೂ ಮೊದಲು ಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡದ ಪರ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ 50 ಎಸೆತಗಳಲ್ಲಿ 92 ರನ್ ಬಾರಿಸಿ ತಂಡದ ಮೊತ್ತ 170ರ ಗಡಿ ದಾಟುವಲ್ಲಿ ನೆರವಾದರು. ಇವರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಗುಜರಾತ್ ಟೈಟನ್ಸ್ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಲು ವಿಫಲರಾದರು.
ಅಂತಿಮವಾಗಿ ಸಿಎಸ್‌ಕೆ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 178 ರನ್ ಗಳಿಸಿತು. ಗುಜರಾತ್ ಟೈಟನ್ಸ್ ಪರ ಸ್ಪಿನ್ನರ್ ರಶೀದ್ ಖಾನ್ 26 ರನ್‌ಗೆ 2 ವಿಕೆಟ್, ವೇಗಿ ಮೊಹಮ್ಮದ್ ಶಮಿ 29 ರನ್‌ಗೆ 2 ವಿಕೆಟ್ ಮತ್ತು ಅಲ್ಜಾರಿ ಜೋಸೆಫ್ 33 ರನ್‌ಗೆ 2 ವಿಕೆಟ್ ಪಡೆದರೆ, ಜೋಶುವಾ ಲಿಟಲ್ ಸಹ ಒಂದು ವಿಕೆಟ್ ಪಡೆದರು. ಒಂದು ಹಂತದಲ್ಲಿ 200ರ ಗಡಿ ಸಮೀಪಿಸುವ ಸೂಚನೆ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗುಜರಾತ್ ಟೈಟನ್ಸ್ ಬೌಲರ್‌ಗಳು ನಿಯಂತ್ರಣ ಹೇರಿದರು.

ಪಂದ್ಯದ ನಂತರ ಮಾತನಾಡಿದ ಎಂಎಸ್ ಧೋನಿ, ಸಿಎಸ್‌ಕೆ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಕನಿಷ್ಠ 15 ರನ್‌ಗಳು ಕಡಿಮೆಯಾದವು ಎಂದು ಹೇಳಿದರು. ತಮ್ಮ ತಂಡದ ಪ್ರಾಮಾಣಿಕ ವಿಮರ್ಶೆಗೆ ಹೆಸರುವಾಸಿಯಾಗಿರುವ ಎಂಎಸ್ ಧೋನಿ, ಬ್ಯಾಟರ್‌ಗಳು ಸರಿಯಾಗಿ ಬ್ಯಾಟಿಂಗ್ ಮಾಡುವ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡರು.
"ನಮಗೆ ಇನ್ನೂ 15-20 ರನ್‌ಗಳು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಸ್ವಲ್ಪ ಇಬ್ಬನಿ ಇರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿತ್ತು, ಅಲ್ಲದೆ ಅದು 7.30ರಿಂದಲೇ ಪ್ರಾರಂಭವಾಯಿತು. ಚೆಂಡು ಸ್ವಲ್ಪ ನಿಧಾನವಾಗಿತ್ತು ಮತ್ತು ಮಧ್ಯಮ ಓವರ್‌ಗಳಲ್ಲಿ ಬೌಂಡರಿ, ಸಿಕ್ಸರ್‌ಗಳು ಬರಲಿಲ್ಲ. ಯುವ ಆಟಗಾರರು ಸರಿಯಾಗಿ ಬ್ಯಾಟಿಂಗ್ ಮಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ," ಎಂದು ಎಂಎಸ್ ಧೋನಿ ತಿಳಿಸಿದರು.

"ರಾಜವರ್ಧನ್ ಹಂಗರ್ಗೇಕರ್ ವೇಗದ ಬೌಲಿಂಗ್ ಮಾಡುತ್ತಾರೆ ಮತ್ತು ಸ್ವಲ್ಪ ಸಮಯದ ನಂತರ ಉತ್ತಮವಾಗುತ್ತಾರೆ. ಬೌಲರ್‌ಗಳು ಸುಧಾರಣೆ ಕಾಣಬೇಕು, ನೋ-ಬಾಲ್ ನಿಮ್ಮ ನಿಯಂತ್ರಣದಲ್ಲಿದೆ. ಆದ್ದರಿಂದ ನೀವು ಅದರ ಮೇಲೆ ಕೆಲಸ ಮಾಡಬೇಕಾಗಿದೆ," ಎಂದು ಎಂಎಸ್ ಧೋನಿ ಪಂದ್ಯದ ನಂತರ ಮಾತನಾಡಿದರು.
ಸುಮಾರು ಒಂದು ವರ್ಷದ ನಂತರ ತನ್ನ ಮೊದಲ ಪಂದ್ಯವನ್ನು ಆಡಿದ ಎಂಎಸ್ ಧೋನಿ, 7 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ ಅಜೇಯ 14 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಪಂದ್ಯವು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಪ್ರಿಲ್ 3ರಂದು ತವರಿನಲ್ಲಿ ಆಡಲಿದೆ. ಇನ್ನು ಗುಜರಾತ್ ಟೈಟನ್ಸ್ ತಂಡದ ಮುಂದಿನ ಪಂದ್ಯ ಏಪ್ರಿಲ್ 4ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದೆಹಲಿಯಲ್ಲಿ ಆಡಲಿದೆ.