CSK vs LSG: ದುಬೆಗೆ 19ನೇ ಓವರ್ ಕೊಟ್ಟು ಕೈ ಸುಟ್ಟುಕೊಂಡ ಧೋನಿ, ಕಾರಣ ಏನು?

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಮೊತ್ತವನ್ನ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗದೆ ಮುಗ್ಗರಿಸಿತು. 210 ರನ್ ಗಳಿಸಿದ್ರೂ, ಪಂದ್ಯ ಗೆಲ್ಲಲು ಸಾಧ್ಯವಾಗದೇ ಐಪಿಎಲ್ 2022ನೇ ಸೀಸನ್‌ನ ಆರಂಭಿಕ ಎರಡು ಪಂದ್ಯಗಳನ್ನ ಸೋತಿದೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಎಂದಿಗೂ ಆರಂಭಿಕ ಎರಡು ಪಂದ್ಯ ಸೋತಿರಲಿಲ್ಲ.
ಸಿಎಸ್‌ಕೆ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಕ್ಯಾಚ್ ಡ್ರಾಪ್ ಕೂಡ ಒಂದಾಗಿದೆ. ಮೊಯಿನ್ ಅಲಿ ಕ್ವಿಂಟನ್ ಡಿಕಾಕ್ ಕ್ಯಾಚ್ ಕೈ ಚೆಲ್ಲಿದ್ದು ತಂಡಕ್ಕೆ ನುಂಗಲಾರದ ತುತ್ತಾಯಿತು. ಇದರ ಜೊತೆಗೆ ಮತ್ತೊಂದು ಕ್ಯಾಚ್ ಕೂಡ ಕೈ ಜಾರಿತು. ಇದಲ್ಲದೆ 19 ನೇ ಓವರ್‌ನಲ್ಲಿ ಆಲ್‌ರೌಂಡರ್ ಶಿವಂ ದುಬೆ 25 ರನ್‌ಗಳನ್ನ ಬಿಟ್ಟುಕೊಡುವ ಮೂಲಕ ದುಬಾರಿಯಾದ್ರು. ದುಬೆಗೆ 19ನೇ ಒವರ್ ನೀಡಿದರ ಕುರಿತಾಗಿ ಸಾಕಷ್ಟು ಟೀಕೆ ಕೂಡ ವ್ಯಕ್ತವಾಯಿತು.
ಸಿಎಸ್‌ಕೆ ನೀಡಿದ್ದ 211 ರನ್ ಗುರಿ ಬೆನ್ನತ್ತಿದ ಲಕ್ನೋ ಎದುರಾಳಿ ತಂಡದ ಕ್ಯಾಚ್ ಡ್ರಾಪ್ ಜೊತೆಗೆ ಅಬ್ಬರದ ಬ್ಯಾಟಿಂಗ್ ನಡೆಸಿದ ಕೆ.ಎಲ್ ರಾಹುಲ್ 26 ಎಸೆತಗಳಲ್ಲಿ 40 ರನ್ ಸಿಡಿಸಿದ್ರೆ, ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ 45 ಎಸೆತಗಳಲ್ಲಿ 61 ರನ್ ಸಿಡಿಸಿ ಮಿಂಚಿದ್ದಾರೆ.
ಇದರ ನಡುವೆ ಮನೀಶ್ ಪಾಂಡೆ ಕೇವಲ 5 ರನ್‌ಗಳಿಸಿ ತುಶಾರ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದ್ರು . ದೀಪಕ್ ಹೂಡ ಆಟ 13ರನ್‌ಗೆ ಮುಕ್ತಾಯಗೊಂಡಿತು. ಆದ್ರೆ ಅಬ್ಬರದ ಬ್ಯಾಟಿಂಗ್ ನಡೆಸಿದ ಎವಿನ್ ಲೂಯಿಸ್ ಕೇವಲ 23 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚಿದ್ರು. ಅಜೇಯ 55 ರನ್ ಕಲೆಹಾಕಿದ ಎವಿನ್ ಲೂಯಿಸ್ ಆರು ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್ ಸಿಡಿಸಿದ್ರು.

ಇನ್ನು ಲಕ್ನೋ ಪರ ಕಳೆದ ಪಂದ್ಯದಲ್ಲೂ ಮಿಂಚಿದ್ದ ಯುವ ಬ್ಯಾಟ್ಸ್‌ಮನ್ ಆಯುಷ್ ಬದೋನಿ 9 ಎಸೆತಗಳಲ್ಲಿ ಎರಡು ಅಮೋಘ ಸಿಕ್ಸರ್‌ಗಳ ನೆರವಿನಿಂದ ಅಜೇಯ 19 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಲಕ್ನೋ ಸೂಪರ್ ಜೈಂಟ್ಸ್ ಬೃಹತ್ ಮೊತ್ತವನ್ನ ಬೆನ್ನತ್ತಿ ಐಪಿಎಲ್‌ನಲ್ಲಿ ತನ್ನ ಮೊಟ್ಟ ಮೊದಲ ಗೆಲುವು ದಾಖಲಿಸಿದೆ.
ಈ ಪಂದ್ಯ ಸೋಲಿಗೆ ಪ್ರಮುಖ ಕಾರಣ 19ನೇ ಓವರ್. ಈ ಹಂತದಲ್ಲಿ ಧೋನಿ ಆಲ್ ರೌಂಡರ್ ಶಿವಂ ದುಬೆ ಅವರನ್ನು 19ನೇ ಓವರ್ ಬೌಲ್ ಮಾಡಲು ಕರೆದರು. ಆ ಓವರ್‌ನಲ್ಲಿ 2 ಸಿಕ್ಸರ್, 2 ಬೌಂಡರಿ ಸೇರಿದಂತೆ 25 ರನ್ ಗಳಿಸಲಾಯಿತು. ಎವಿನ್ ಲೂಯಿಸ್ - ಆಯುಷ್ ಬದೋನಿ ಜೋಡಿ ದುಬೆ ಅವರ ಓವರ್‌ನಲ್ಲಿ ಅಬ್ಬರಿಸಿದ್ರು.
ಹೀಗಾಗಿ 19ನೇ ಓವರ್ ಅನ್ನು ಆಲ್ ರೌಂಡರ್ ದುಬೆಗೆ ಬೌಲಿಂಗ್ ಮಾಡಲು ನೀಡಿ ಧೋನಿ ತಪ್ಪು ಮಾಡಿದ್ದಾರೆ ಎಂದು ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಆದ್ರೆ ಅದೇ ಧೋನಿಯ ಯಶಸ್ವಿ ಸೂತ್ರ. ಇಂತಹ ಮುಜುಗರದ ಪರಿಸ್ಥಿತಿ ಬಂದಾಗ ಬ್ಯಾಟ್ಸ್ ಮನ್ ಗಳಿಗೆ ಹಳೆಯ ಬೌಲರ್ ಗಳ ಬಗ್ಗೆ ಚೆನ್ನಾಗಿ ಅರಿವಿದೆ. ಆದರೆ ಹೊಸ ಬೌಲರ್‌ಗಳನ್ನು ಎದುರಿಸಲು ಕಷ್ಟವಾಗುತ್ತದೆ ಎಂದು ಧೋನಿ ಹಲವು ಪಂದ್ಯಗಳಲ್ಲಿ ಈ ತಂತ್ರವನ್ನು ಬಳಸಿದ್ದಾರೆ.
2016ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಒಂದು ರನ್‌ನಿಂದ ಗೆದ್ದಿದ್ದು ಕೂಡ ಇದೇ ಫಾರ್ಮುಲಾದಲ್ಲಿ. ಪದೇ ಪದೇ ಯಶಸ್ಸನ್ನು ನೀಡಿದ ತಂತ್ರ ನಿನ್ನೆ ವಿಫಲವಾಗಿದೆ. ಇದಕ್ಕೆ ಕಾರಣ ನಿನ್ನೆ ಮೈದಾನದಲ್ಲಿದ್ದ ಇಬ್ಬನಿ ಪ್ರಭಾವ. ಚೆಂಡು ಕೈಯಿಂದ ಜಾರುತ್ತಿದ್ದರಿಂದ ಸರಿಯಾದ ಲೆಂಥ್‌ನಲ್ಲಿ ಬೌಲ್ ಮಾಡಲು ಸಾಧ್ಯವಾಗಲಿಲ್ಲ. ಇದೇ ವೈಫಲ್ಯಕ್ಕೆ ಕಾರಣ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications