CSK vs RR IPL 2023: ಎಂಎಸ್ ಧೋನಿ ಬ್ಯಾಟಿಂಗ್ ಮಾಡುವಾಗ ದಾಖಲೆ ಬರೆದ ಡಿಜಿಟಲ್ ವೀಕ್ಷಕರ ಸಂಖ್ಯೆ
ಬುಧವಾರ, ಏಪ್ರಿಲ್ 12ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಕೊನೆಯ ಓವರ್‌ನಲ್ಲಿ ವಿರೋಚಿತ ಸೋಲು ಕಂಡಿತು.
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ನೀಡಿದ್ದ 176 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‌ಗೆ 172 ರನ್ ಗಳಿಸಿತು ಮತ್ತು ಕೇವಲ 3 ರನ್‌ಗಳಿಂದ ಪರಾಭವಗೊಂಡಿತು.

ಇನ್ನು ಸಿಎಸ್‌ಕೆ ನಾಯಕ ಎಂಎಸ್ ಧೋನಿ ವಿಶ್ವ ಕ್ರಿಕೆಟ್‌ನ ಅತ್ಯಂತ ದೊಡ್ಡ ಹೆಸರುಗಳಲ್ಲಿ ಒಂದಾಗಿದೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಎರಡು ವರ್ಷಗಳ ನಂತರವೂ ಅವರು ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.
2023ರ ಐಪಿಎಲ್‌ನ 17ನೇ ಪಂದ್ಯದ ವೇಳೆ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಚೇಸಿಂಗ್‌ನಲ್ಲಿ ಎಂಎಸ್ ಧೋನಿ ಬ್ಯಾಟಿಂಗ್‌ಗೆ ಬಂದಾಗ ಐಪಿಎಲ್‌ನ ಡಿಜಿಟಲ್ ಪ್ರಸಾರಕ ಜಿಯೋ ಸಿನಿಮಾದ ವೀಕ್ಷಕರ ಸಂಖ್ಯೆ ಏಕಕಾಲದಲ್ಲಿ 2.2 ಕೋಟಿಯಷ್ಟು ದಾಖಲೆಯ ವೀಕ್ಷಣೆ ಕಂಡಿದೆ.
ಇದಕ್ಕೂ ಮೊದಲು 2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಹಾಟ್ ಸ್ಟಾರ್ ಡಿಜಿಟಲ್ ವೀಕ್ಷಕರ ಸಂಖ್ಯೆ 1.8 ಕೋಟಿ ತಲುಪಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಅದನ್ನು ಮೀರಿ ಡಿಜಿಟಲ್ ವೀಕ್ಷಕರು ಎಂಎಸ್ ಧೋನಿ ಬ್ಯಾಟಿಂಗ್ ವೀಕ್ಷಿಸಿದ್ದಾರೆ.
ಈ ಐಪಿಎಲ್ ಋತುವಿನ ತಮ್ಮ ಎರಡನೇ ತವರಿನಲ್ಲಿ ಪಂದ್ಯವನ್ನು ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ 113 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿತ್ತು. ಈ ವೇಳೆ ಬ್ಯಾಟಿಂಗ್‌ಗೆ ಬಂದ ಎಂಎಸ್ ಧೋನಿ ಮತ್ತೊಮ್ಮೆ ಸಿಎಸ್‌ಕೆ ಇನ್ನಿಂಗ್ಸ್‌ನ ಮೇಲೆ ಹಿಡಿತ ಸಾಧಿಸಲು ನೆರವಾದರು.
ಆದರೆ, ಕೊನೆಯಲ್ಲಿ ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ಅವರ ಪ್ರಬಲ ಹೋರಾಟದ ನಡುವೆಯೂ ರಾಜಸ್ಥಾನ ರಾಯಲ್ಸ್ ವಿರುದ್ಧ ಯಶಸ್ವಿ ರನ್ ಚೇಸ್ ಮಾಡುವಲ್ಲಿ ಸಿಎಸ್‌ಕೆ ಎಡವಿತು. 15ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಎಂಎಸ್ ಧೋನಿ ಅಜೇಯರಾಗಿ ಉಳಿದರೂ, ತಂಡವನ್ನು ಗೆಲ್ಲಿಸಲಾಗಲಿಲ್ಲ.
ಆಲ್‌ರೌಂಡರ್ ರವೀಂದ್ರ ಜಡೇಜಾ ಅವರೊಂದಿಗೆ ಎಂಎಸ್ ಧೋನಿ ಬ್ಯಾಟಿಂಗ್ ಮಾಡುವ ಈ ಅವಧಿಯಲ್ಲಿಯೇ ಲೈವ್ ಆಗಿ ವೀಕ್ಷಿಸಲು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ 2.2 ಕೋಟಿಗಳಷ್ಟು ಬೃಹತ್ ವೀಕ್ಷಕರನ್ನು ನೋಂದಾಯಿಸಿತು.

ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕೇವಲ 17 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 32 ರನ್ ಬಾರಿಸಿದರು. ಇನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ 15 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಮೇತ ಅಜೇಯ 25 ರನ್ ಗಳಿಸಿದರು.
ಧೋನಿ ಮತ್ತು ಜಡೇಜಾ ಜೋಡಿ ಪಂದ್ಯವನ್ನು ಸೀಟಿನ ಅಂಚಿನಲ್ಲಿ ಕುಳಿತು ವೀಕ್ಷಿಸುವಂತೆ ಮಾಡಿದ್ದರು. ಗೆಲುವಿನ ಸಮೀಪಕ್ಕೆ ಕೊಂಡೊಯ್ದರೂ, ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ತಂಡದ ಗೆಲುವಿಗೆ 21 ರನ್‌ಗಳ ಅವಶ್ಯಕತೆ ಇತ್ತು.
ಅಂತಿಮ ಓವರ್ ಎಸೆಯಲು ಬಂದ ರಾಜಸ್ಥಾನ ರಾಯಲ್ಸ್ ವೇಗಿ ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ 2 ಮತ್ತು 3ನೇ ಎಸೆತದಲ್ಲಿ ಸತತ ಎರಡು ಸಿಕ್ಸರ್ ಬಾರಿಸಿದರು. ಆದರೆ, ನಂತರದ ಮೂರು ಎಸೆತಗಳಲ್ಲಿ ಕೇವಲ ಮೂರು ರನ್ ಬಿಟ್ಟುಕೊಟ್ಟರು.
ಕೊನೆಯ ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ಎಂಎಸ್ ಧೋನಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಯಾರ್ಕರ್ ಎಸೆದ ಸಂದೀಪ್ ಶರ್ಮಾ ಕೇವಲ ರನ್ ನೀಡಿದರು. ಈ ಮೂಲಕ ತವರಿನಲ್ಲಿಯೇ ರಾಜಸ್ಥಾನ ರಾಯಲ್ಸ್ ಎದುರು 3 ರನ್‌ಗಳ ರೋಚಕ ಸೋಲು ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications