
ದುಬೈ ಇಂಟರ್‌ನ್ಯಾಷ್‌ನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹೊಸ ಸ್ಟ್ರಾಟರ್ಜಿ ಜೊತೆಗೆ ಗೆಲುವು ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಐಪಿಎಲ್ 13ನೇ ಆವೃತ್ತಿಯ 29ನೇ ಪಂದ್ಯದಲ್ಲಿ ಸಿಎಸ್‌ಕೆ ವರ್ಸಸ್ ಹೈದ್ರಾಬಾದ್ ಪಂದ್ಯಕ್ಕೂ ಮೊದಲು ಪಾಯಿಂಟ್ಸ್ ಟೇಬಲ್‌ನಲ್ಲಿ ಕೇವಲ ನಾಲ್ಕು ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದ ಸಿಎಸ್‌ಕೆ ಹೈದ್ರಾಬಾದ್ ವಿರುದ್ಧ 20ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಆರು ಪಾಯಿಂಟ್ಸ್‌ನೊಂದಿಗೆ ಆರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಸನ್‌ರೈಸರ್ಸ್ ಹೈದ್ರಾಬಾದ್ ತಂಡವನ್ನು ತನ್ನ ಚಾಣಾಕ್ಷ್ಯ ಫೀಲ್ಡಿಂಗ್ ಪ್ಲೇಸ್‌ಮೆಂಟ್ ಹಾಗೂ ಕಟ್ಟುನಿಟ್ಟಾದ ಬೌಲಿಂಗ್ ಮೂಲಕ ಕಟ್ಟಿಹಾಕಿದ ಧೋನಿ ಉಳಿದ ಆರು ಪಂದ್ಯಗಳ ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರುವ ನಿರೀಕ್ಷೆ ಹುಟ್ಟುಹಾಕಿದ್ದಾರೆ.
ಯುಎಇನಲ್ಲಿ ಟೂರ್ನಮೆಂಟ್‌ನ ಆರಂಭದಲ್ಲಿ ವೇಗಿಗಳಿಗೆ ಹೆಚ್ಚು ನೆರವಾಗುತ್ತಿದ್ದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ವರ್ಗದಂತೆ ಭಾಸವಾಗುತ್ತಿತ್ತು. ಆದರೆ ಕಳೆದ ಕೆಲ ಪಂದ್ಯಗಳಿಂದ ಪಿಚ್ ನಿಧಾನಗತಿಯತ್ತ ತೆರಳುತ್ತಿದ್ದು, ಒಂದು ವೇಳೆ ಇದು ಮುಂದಿನ ದಿನಗಳಲ್ಲಿ ಹೆಚ್ಚಾದಲ್ಲಿ ಸ್ಪಿನ್ನರ್‌ಗಳಿಗೆ ಸ್ಬರ್ಗವಾಗಲಿದೆ. ಅದರಲ್ಲೂ ಚೆನ್ನೈನ ಚೆಪಾಕ್ ಅಂಗಳಕ್ಕೆ ಹೇಳಿ ಮಾಡಿಸಿದಂತಿರುವ ತಂಡ ಸಿಎಸ್‌ಕೆಗೆ ಇದು ದೊಡ್ಡ ವರದಾನವಾಗಲಿದೆ.

ಇದಕ್ಕೇ ಸ್ಪಷ್ಟ ಉದಾಹರಣೆಯೆಂಬಂತೆ ದುಬೈ ಸ್ಟೇಡಿಯಂನಲ್ಲಿನ ಪಿಚ್‌ನ ಮರ್ಮ ಅರಿತ ಸಿಎಸ್‌ಕೆ ನಾಯಕ ಎಂ.ಎಸ್. ಧೋನಿ ಟೂರ್ನಿಯಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಬ್ಯಾಟಿಂಗ್‌ನಲ್ಲೂ ಪವರ್‌ಪ್ಲೇ ಪ್ರಯೋಗದಂತೆ ಸ್ಯಾಮ್ ಕರನ್ ಓಪನಿಂಗ್ ಇಳಿಸಿ ಕೊಂಚ ಯಶಸ್ವಿಯಾದಂತೆ ಕಾಣುತ್ತಿದೆ. ಸ್ಪಿನ್ನರ್‌ಗಳು ಲಯಕ್ಕೆ ಮರಳಿದ್ದು, ಕಳೆದ ಬಾರಿಯ ಪರ್ಪಲ್ ಕ್ಯಾಪ್ ವಿನ್ನರ್ ಸ್ಪಿನ್ನರ್ ಇಮ್ರಾನ್ ತಾಹೀರ್ ಅಸ್ತ್ರವನ್ನು ಸಿಎಸ್‌ಕೆ ಯಾವಾಗ ಬೇಕಾದರೂ ಬಳಸುವ ಸಾಧ್ಯತೆ ಇದೆ.
ಈ ಮೂಲಕ ಮೂರು ಬಾರಿಯ ಚಾಂಪಿಯನ್ ಸಿಎಸ್‌ಕೆ ನಿಧಾನವಾಗಿ ತನ್ನ ಗೆಲುವಿನ ಟ್ರ್ಯಾಕ್‌ಗೆ ಮರಳುವ ಮುನ್ಸೂಚನೆ ಕೊಟ್ಟಿದೆ. ಜೊತೆಗೆ ಎದುರಾಳಿಗೂ ವಾರ್ನಿಂಗ್ ನೀಡಿದೆ.