ರಿಷಬ್ ಪಂತ್ ಶತಕ ವ್ಯರ್ಥ: ಹೈದರಾಬಾದ್ 9 ವಿಕೆಟ್ ಭರ್ಜರಿ ಜಯ

ನವದೆಹಲಿ, ಮೇ 11: ಏಕಾಂಗಿ ಹೋರಾಟ ಎಲ್ಲಾ ಸಮಯದಲ್ಲೂ ನೆರವಿಗೆ ಬರುವುದಿಲ್ಲ ಎನ್ನುವುದಕ್ಕೆ ಹೈದರಾಬಾದ್ ಎದುರಿನ ಡೆಲ್ಲಿ ಸೋಲು ಮತ್ತೊಮ್ಮೆ ಸಾಕ್ಷಿಯಾಯಿತು. ರಿಷಬ್ ಪಂತ್ ಅಮೋಘ-ಅಜೇಯ 128 ರನ್ ಹೊರತಾಗಿಯೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ಎದುರು 9 ವಿಕೆಟ್ ಸೋಲನುಭವಿಸಿತು.
ಡೆಲ್ಲಿ ನೀಡಿದ್ದ 188 ರನ್ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್, ಶಖರ್ ಧವನ್ ಅಜೇಯ 92 (50) ರನ್ ಮತ್ತು ಕೇನ್ ವಿಲಿಯಮ್ಸನ್ ಅಜೇಯ 83 (53) ರನ್ ನೆರವಿನೊಂದಿಗೆ 18.5 ಓವರ್ ನಲ್ಲಿ ಒಂದೇ ವಿಕೆಟ್ ನಷ್ಟಕ್ಕೆ 191 ರನ್ ಪೇರಿಸಿ ಸುಲಭ ಜಯ ದಾಖಲಿಸಿತು.
ಡೆಲ್ಲಿ ಪರ ಪಂತ್ ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್ಮನ್ 25ಕ್ಕೂ ಹೆಚ್ಚು ರನ್ ಗಳಿಸದೆ ವಿಕೆಟ್ ಒಪ್ಪಿಸಿ ನಡೆದಿದ್ದು ಮತ್ತು ಬೌಲಿಂಗ್ ಮೂಲಕ ಎದುರಾಳಿಯನ್ನು ಕಟ್ಟಿ ಹಾಕುವಲ್ಲಿ ಎಡವಿದ್ದು ತಂಡ ಸೋಲನ್ನು ಬರ ಮಾಡಿಕೊಳ್ಳಲು ಕಾರಣವಾಯಿತು.
ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಈ ಐಪಿಎಲ್ 42ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಡೇರ್ ಡೆವಿಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿ ಹೈದರಾಬಾದ್ ಗೆ 188 ರನ್ ಗುರಿ ನೀಡಿತ್ತು.
ಪೃಥ್ವಿ ಶಾ 9 (11), ಜೇಸನ್ ರಾಯ್ 11 (13), ನಾಯಕ ಶ್ರೇಯಸ್ ಐಯರ್ 3 (8), ಹರ್ಷಲ್ ಪಟೇಲ್ 24 (17), ಗ್ಲೆನ್ ಮ್ಯಾಕ್ಸ್ ವೆಲ್ 9 (8) ರನ್ ಬೆಂಬಲ ಸಾಲದೆ ಡೆಲ್ಲಿ ತಂಡ ಸೋಲಿನತ್ತ ಜಾರಿತು. ತಂಡದ ಮೊತ್ತ ಏರಿಸುವಲ್ಲಿ ಹೆಣಗಾಡಿದ್ದು ರಿಶಬ್ ಪಂತ್ ಒಬ್ಬರೆ.
ಒಟ್ಟು 63 ಎಸೆತಗಳನ್ನು ಎದುರಿಸಿದ ಪಂತ್ 128 ರನ್ ದಾಖಲೆ ಮೆರೆದರಾದರೂ ಏಕಾಂಗಿ ಹೋರಾಟ ಡೆಲ್ಲಿಗೆ ಗೆಲುವು ತಂದು ಕೊಡಲಿಲ್ಲ. ಅಲೆಕ್ಸ್ ಹೇಲ್ಸ್ ಔಟಾದ ಬಳಿಕ ಬ್ಯಾಟಿಂಗ್ ಅಬ್ಬರ ನಡೆಸಿದ ಧವನ್-ವಿಲಿಯಮ್ಸನ್ ಜೋಡಿ ಸನ್ ರೈಸರ್ಸ್ ತಂಡವನ್ನು ಗೆಲುವಿನ ಗೆರೆ ದಾಟಿಸಿತು.
ಈ ಗೆಲುವಿನ ಬಳಿಕ ಮತ್ತೆ ಅಗ್ರ ಸ್ಥಾನಕ್ಕೆ ಅಂಟಿಕೊಂಡ ಹೈದರಾಬಾದ್ ತಂಡದ ಶಿಖರ್ ಧವನ್ ಅವರು ಸ್ಫೋಟಕ ಬ್ಯಾಟಿಂಗ್ ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications