ಗುರುವಾರ, ಆಗಸ್ಟ್ 3ರಂದು ಪುದುಚೇರಿಯಲ್ಲಿ ನಡೆದ 2023ರ ದೇವಧರ್ ಟ್ರೋಫಿ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ ವಿರುದ್ಧ 45 ರನ್‌ಗಳಿಂದ ಗೆಲುವು ಸಾಧಿಸಿದ ದಕ್ಷಿಣ ವಲಯ ತಂಡ ಪ್ರಶಸ್ತಿ ಎತ್ತಿ ಹಿಡಿಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ವಲಯ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 328 ರನ್‌ಗಳನ್ನು ಕಲೆಹಾಕಿತು. 329 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಪೂರ್ವ ವಲಯ ತಂಡ 46.1 ಓವರ್‌ಗಳಲ್ಲಿ 283 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಇನ್ನು ದಕ್ಷಿಣ ವಲಯ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ರೋಹನ್ ಕುನ್ನುಮ್ಮಾಲ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್‌ಗೆ 24.4 ಓವರ್‌ಗಳಲ್ಲಿ 181 ರನ್‌ಗಳ ಜೊತೆಯಾಟ ನೀಡಿ ಭದ್ರ ಬುನಾದಿ ಹಾಕಿದರು.
ರೋಹನ್ ಕುನ್ನುಮ್ಮಾಲ್ 75 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಮೇತ 107 ರನ್‌ಗಳ ಭರ್ಜರಿ ಶತಕ ಬಾರಿಸಿದರು. ನಾಯಕ ಮಯಾಂಕ್ ಅಗರ್ವಾಲ್ 83 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 63 ರನ್ ಗಳಿಸಿದರು. ನಂತರ ಬಂದ ಸಾಯಿ ಸುದರ್ಶನ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಬಳಿಕ ಎನ್ ಜಗದೀಸನ್ 60 ಎಸೆತಗಳಲ್ಲಿ 54 ರನ್, ರೋಹಿತ್ ರಾಯುಡು 26 ರನ್, ಅರುಣ್ ಕಾರ್ತಿಕ್ 2 ರನ್, ಸಾಯಿ ಕಿಶೋರ್ 24 ರನ್, ವಿಜಯ್‌ಕುಮಾರ್ ವೈಶಾಕ್ 11 ರನ್ ಗಳಿಸಿ ತಂಡದ ಮೊತ್ತ 320ರ ಗಡಿ ದಾಟಲು ನೆರವಾದರು.
ಪೂರ್ವ ವಲಯ ತಂಡದ ಪರ ಬೌಲಿಂಗ್‌ನಲ್ಲಿ ಶಹಬಾಜ್ ಅಹ್ಮದ್, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್ ತಲಾ ಎರಡು ವಿಕೆಟ್ ಪಡೆದರೆ, ಮುರಾಸಿಂಗ್ ಮತ್ತು ಆಕಾಶ್ ದೀಪ್ ತಲಾ ಒಂದೊಂದು ವಿಕೆಟ್ ಪಡೆದರು.
ಪ್ರತ್ಯುತ್ತರವಾಗಿ, 329 ರನ್‌ಗಳ ಚೇಸಿಂಗ್‌ನಲ್ಲಿ ಪೂರ್ವ ವಲಯ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ತಂಡದ ಮೊತ್ತ 14 ರನ್‌ಗಳಾಗುವಷ್ಟರಲ್ಲಿ ಪ್ರಮುಖ 3 ವಿಕೆಟ್‌ಗಳು ಉದುರಿದವು. ವಿ ಕೌಶಿಕ್ ಆರಂಭಿಕ ಎರಡು ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ ಇನ್ನೊಂದು ವಿಕೆಟ್ ಪಡೆದರು.
ದಕ್ಷಿಣ ವಲಯ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದ ಸಂದರ್ಭದಲ್ಲಿ ರಿಯಾನ್ ಪರಾಗ್ 65 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ಸಹಾಯದಿಂದ 95 ರನ್ ಬಾರಿಸಿದರು. ಇನ್ನು ಕುಮಾರ್ ಕುಶಾಗ್ರ 58 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿ 68 ರನ್ ಗಳಿಸಿ ಪೂರ್ವ ವಲಯ ತಂಡಕ್ಕೆ ಜೀವ ತುಂಬಿದ್ದರು. ಈ ಜೋಡಿ ಆರನೇ ವಿಕೆಟ್‌ಗೆ 105 ರನ್‌ಗಳ ಜೊತೆಯಾಟ ನೀಡಿದರು.
ಉಳಿದಂತೆ ಸುದಿಪ್ ಗರಾಮಿ 41 ರನ್, ಸೌರಬ್ ತಿವಾರಿ 28 ರನ್, ಶಹಬಾಜ್ ಅಹ್ಮದ್ 17 ರನ್, ಮುರಾಸಿಂಗ್ 5 ರನ್, ಆಕಾಶ್ ದೀಪ್ 7 ರನ್ ಗಳಿಸಿದರು. ಕೊನೆಯಲ್ಲಿ ವಿಕೆಟ್‌ಗಳು ಬೇಗನೆ ಉರುಳಿದ ಕಾರಣ ಗೆಲುವಿನ ಸಮೀಪ ಹೋಗಲು ಸಾಧ್ಯವಾಗಲಿಲ್ಲ.
ದಕ್ಷಿಣ ವಲಯ ತಂಡದ ಪರ ಬೌಲಿಂಗ್‌ನಲ್ಲಿ ವಾಷಿಂಗ್ಟನ್ ಸುಂದರ್ 10 ಓವರ್‌ಗಳಲ್ಲಿ 60 ರನ್ ನೀಡಿ 3 ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ವಿಜಯಕುಮಾರ್ ವೈಶಾಕ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಸಾಯಿಕಿಶೋರ್ ಒಂದು ವಿಕೆಟ್ ಕಬಳಿಸಿದರು.
2023ರ ದೇವಧರ್ ಟ್ರೋಫಿ ಫೈನಲ್‌ನಲ್ಲಿ ಶತಕ ಸಿಡಿಸಿದ ದಕ್ಷಿಣ ವಲಯ ತಂಡದ ರೋಹನ್ ಕುನ್ನುಮ್ಮಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೂರ್ವ ವಲಯ ತಂಡದ ರಿಯಾನ್ ಪರಾಗ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.