ಮೊನ್ನೆ ಪಾಕಿಸ್ತಾನ, ನಿನ್ನೆ ಶ್ರೀಲಂಕಾ: ಮತ್ತೆ ಜಗಜ್ಜಾಹೀರಾಯಿತು ಟೀಮ್ ಇಂಡಿಯಾದ ದೌರ್ಬಲ್ಯ!!
ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಫೈನಲ್‌ಗೆ ಪ್ರವೇಶ ಪಡೆದಿದೆ. ಸೂಪರ್ 4 ಹಂತದಲ್ಲಿ ಎರಡು ಬಲಿಷ್ಠ ತಂಡಗಳ ವಿರುದ್ಧ ಭಾರತ ತಂಡ ಅಮೋಘ ಗೆಲುವು ಸಾಧಿಸಿದ್ದು ಅರ್ಹವಾಗಿಯೇ ಫೈನಲ್‌ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಮೂಲಕ ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸಿದ್ಧತೆ ಭರ್ಜರಿಯಾಗಿಯೇ ಇದೆ.
ಹಾಗಂತ ಟೀಮ್ ಇಂಡಿಯಾ ಎಲ್ಲಾ ವಿಭಾಗದಲ್ಲಿಯೂ ನಿರಾಳವಾಗಿದೆಯಾ? ವಿಶ್ವಕಪ್‌ಗಾಗಿ ಭಾರತ ತಂಡದ ಸಿದ್ಧತೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆಯಾ? ಸೂಪರ್ 4 ಹಂತದಲ್ಲಿ ಟೀಮ್ ಇಂಡಿಯಾ ಸಾಧಿಸಿದ ಈ ಗೆಲುವು ಎಲ್ಲಾ ವಿಭಾಗದ ಪ್ರಶ್ನೆಗಳಿಗೂ ಉತ್ತರ ನೀಡುವಂತಿದೆಯಾ? ಪಡೆದಿರುವ ಅಂತಿಮ ಫಲಿತಾಂಶವನ್ನು ಮಾತ್ರವೇ ದೃಷ್ಟಿಯಲ್ಲಿಟ್ಟುಕೊಂಡರೆ ಹೌದು ಎನ್ನುವ ಉತ್ತರ ದೊರೆಯಬಹುದು. ಆದರೆ ಭಾರತ ತಂಡದ ಮುಂದಿರುವುದು ವಿಶ್ವಕಪ್ ಟೂರ್ನಿ. ಹಾಗಾಗಿ ಈ ಹಂತದಲ್ಲಿ ತಂಡ ದೌರ್ಬಲ್ಯಗಳನ್ನು ಮರೆಮಾಚಿ ಕಣಕ್ಕಿಳಿಯುವುದು ಅಸಾಧ್ಯ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಈವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಇದರಲ್ಲಿ ಮೂರು ಪಂದ್ಯಗಳಲ್ಲಿ ಫಲಿತಾಂಶ ಪಡೆದುಕೊಂಡಿದ್ದು ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಪಾಕಿಸ್ತಾನದ ವಿರುದ್ಧದ ಲೀಗ್ ಹಂತದ ಪಂದ್ಯ ರದ್ದಾಗಿ ಫಲಿತಾಂಶ ಕಾಣದಿದ್ದರೂ ಭಾರತ ತನ್ನ ಬ್ಯಾಟಿಂಗ್ ಸಂಪೂರ್ಣವಾಗಿ ನಡೆಸಿರುವ ಕಾರಣ ಅಲ್ಲಿನ ಪ್ರದರ್ಶನವನ್ನು ಕೂಡ ಇಲ್ಲಿ ಪರಿಗಣಿಸಲಾಗುತ್ತಿದೆ. ಯಾಕೆಂದರೆ ಇದು ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಅಭಿಮಾನಿಗಳ ಕಳವಳ!
ಪಾಕಿಸ್ತಾನದ ವಿರುದ್ಧ ಎಲ್ಲಾ 10 ವಿಕೆಟ್ ವೇಗಿಗಳಿಗೆ
ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ಮಳೆಯಿಂದಾಗಿ ರದ್ದಾಗಿದ್ದ ಪಂದ್ಯದಲ್ಲಿ ಭಾರತ ತನ್ನ ಬ್ಯಾಟಿಂಗ್ ಸಂಪೂರ್ಣವಾಗಿ ನಡೆಸಿತ್ತು. ಟೀಮ್ ಇಂಡಿಯಾ ಪರವಾಗಿ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಆ ಪಂದ್ಯದಲ್ಲಿ ಕ್ರಮವಾಗಿ 82 ರನ್ ಹಾಗೂ 87 ರನ್‌ಗಳನ್ನು ಗಳಿಸಿ ಮಿಂಚಿದ್ದರು. ಈ ಇಬ್ಬರು ಆಟಗಾರರ ಈ ಅದ್ಭುತ ಪ್ರದರ್ಶನ ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳ ಪ್ರದರ್ಶನ ಕಳಪೆ. ವಿಪರ್ಯಾಸ ಎಂದರೆ ಆ ಪಂದ್ಯದಲ್ಲಿ ಟೀಮ್ ಇಂಡಿಯಾದ ಎಲ್ಲಾ 10 ವಿಕೆಟ್‌ಗಳು ಕೂಡ ಪಾಕಿಸ್ಥಾನದ ವೇಗದ ಬೌಲರ್‌ಗಳ ಪಾಲಾಗಿತ್ತು.
ಇದಾದ ಬಳಿಕ ಪಾಕಿಸ್ತಾನ ತಂಡವನ್ನು ಮತ್ತೆ ಸೂಪರ್ 4 ಹಂತದಲ್ಲಿ ಎದುರಿಸಿದ ಭಾರತ ಗ್ರೂಪ್ ಹಂತದಲ್ಲಿ ಮೂಡಿಸಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಂದ ಬಂದ ಅಮೋಘ ಪ್ರದರ್ಶನ ಅಭಿಮಾನಿಗಳನ್ನು ನಿರಾಳವಾಗಿಸಿತ್ತು. ಆದರೆ ಶ್ರೀಲಂಕಾ ವಿರುದ್ಧ ನಡೆದ ಮತ್ತೊಂದು ಸೂಪರ್ 4 ಪಂದ್ಯದಲ್ಲಿ ಮತ್ತೆ ಟೀಮ್ ಇಂಡಿಯಾದ ಮತ್ತೊಂದು ದೌರ್ಬಲ್ಯವನ್ನು ಜಗಜ್ಜಾಹೀರುಗೊಳಿಸಿದೆ.
ಸ್ಪಿನ್ನರ್‌ಗಳ ವಿರುದ್ಧ ಪರದಾಡಿದ ಭಾರತ
ಸೂಪರ್ 4 ಹಂತದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್‌ಗಳು ಸ್ಪಿನ್ನರ್‌ಗಳ ವಿರುದ್ಧ ನೀಡಿದ ಪ್ರದರ್ಶನ ವಿಶ್ವಕಪ್ ಸನಿಹದಲ್ಲಿರುವಾಗ ನಿಜಕ್ಕೂ ದಿಗಿಲು ಹುಟ್ಟಿಸುವಂತಿದೆ. ಭಾರತ ತಂಡದ ಆಟಗಾರರು ಇತ್ತೀಚೆಗೆ ಸ್ಪಿನ್ನರ್‌ಗಳ ವಿರುದ್ಧ ಪರದಾಡುತ್ತಿದ್ದು ಲಂಕಾದ ಗುಣಮಟ್ಟದ ಬೌಲರ್‌ಗಳ ವಿರುದ್ಧ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ವಿಪರ್ಯಾಸ ಎಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಎಲ್ಲಾ 10 ವಿಕೆಟ್‌ಗಳನ್ನು ಕೂಡ ಶ್ರೀಲಂಕಾದ ಸ್ಪಿನ್ನರ್‌ಗಳಿಗೆ ನೀಡಿದೆ. ವಿಶ್ವಕಪ್ ಅತ್ಯಂತ ಸನಿಹದಲ್ಲಿರುವಾಗ ಈ ಪ್ರದರ್ಶನ ನಿಜಕ್ಕೂ ಕಳವಳಕಾರಿ.
ಕಳವಳಕ್ಕೆ ಕಾರಣ ಇದೆ
ಇನ್ನು ಟೀಮ್ ಇಂಡಿಯಾ ಸ್ಪಿನ್ನರ್‌ಗಳ ವಿರುದ್ಧ ನೀಡಿರುವ ಈ ಪ್ರದರ್ಶನದಿಂದ ಕಳವಳಗೊಳ್ಳಲು ಕಾರಣವೂ ಇದೆ. ಈ ಬಾರಿಯ ವಿಶ್ವಕಪ್ ಭಾರತದಲ್ಲಿಯೇ ನಡೆಯಲಿರುವ ಕಾರಣ ಭಾರತದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳ ವಿರುದ್ಧ ಭಾರತದ ದಾಂಡಿಗರಿಂದ ಪರಿಣಾಮಕಾರಿ ಪ್ರದರ್ಶನ ಬರಲೇ ಬೇಕಿದೆ. ಪ್ರಸ್ತುತ ವಿಶ್ವದ ಪ್ರಮುಖ ಎಲ್ಲಾ ತಂಡದಲ್ಲಿಯೂ ಬಲಿಷ್ಠವಾದ ಸ್ಪಿನ್ನರ್‌ಗಳ ಪಡೆಯಿದೆ ಎನ್ನುವುದನ್ನು ಗಮನಿಸಬೇಕಿದೆ. ಭಾರತೀಯ ಬ್ಯಾಟರ್‌ಗಳು ವೇಗಿಗಳ ವಿರುದ್ಧ ಮೇಲುಗೈ ಸಾಧಿಸಿದರೂ ಸ್ಪಿನ್ನರ್‌ಗಳ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಹಿನ್ನಡೆ ಅನುಭವಿಸುತ್ತಾ ಬಂದಿದ್ದಾರೆ. ತಂಡದ ಅನುಭವಿ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡ ಇದರಿಂದ ಹೊರತಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಹೀಗಾಗಿ ಉಳಿದಿರುವ ಅಲ್ಪ ಅವಧಿಯಲ್ಲಿ ಭಾರತ ಈ ಕಡೆಗೆ ಗಮನಹರಿಸುವುದು ಅನಿವಾರ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications