2006ರಲ್ಲಿ ದ.ಆಫ್ರಿಕಾ ವಿರುದ್ಧದ ಚೊಚ್ಚಲ ಟಿ20ಯಲ್ಲಿ ಕಣಕ್ಕಿಳಿದಿದ್ದ ಇವರು ಇಂದಿಗೂ ಭಾರತ ತಂಡದಲ್ಲಿದ್ದಾರೆ!

ಇಂಡಿಯನ್ ಪ್ರಿಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಸದ್ಯ ಕಣಕ್ಕಿಳಿಯುತ್ತಿದೆ. ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದೆ.
ಇನ್ನು ಸತತ 12 ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆಲುವನ್ನು ಕಂಡಿರುವ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಈ ಟಿ ಟ್ವೆಂಟಿ ಸರಣಿಯ ಪ್ರಥಮ ಪಂದ್ಯವನ್ನು ಗೆದ್ದರೆ 13 ಸತತ ಗೆಲುವುಗಳನ್ನು ಕಾಣಲಿದ್ದು ನೂತನ ದಾಖಲೆಯನ್ನು ಬರೆಯಲಿದೆ. ಇನ್ನು ಇತ್ತಂಡಗಳ ನಡುವಿನ ಪ್ರಥಮ ಪಂದ್ಯ ಇಂದು ( ಜೂನ್ 9 ) ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾ ಈ ಐತಿಹಾಸಿಕ ದಾಖಲೆ ಬರೆಯುವ ಕಡೆ ಚಿತ್ತ ನೆಟ್ಟಿದೆ.
ತಂಡದ ಅನುಭವಿ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಜಸ್ ಪ್ರೀತ್ ಬೂಮ್ರಾ ವಿಶ್ರಾಂತಿಗೆಂದು ಈ ಸರಣಿಯಿಂದ ಹೊರಗುಳಿದಿದ್ದು, ಕೆ ಎಲ್ ರಾಹುಲ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಕೆಎಲ್ ರಾಹುಲ್ ಗಾಯದ ಸಮಸ್ಯೆಗೆ ಒಳಗಾದ ಕಾರಣ ಇದೀಗ ನಾಯಕತ್ವದ ಜವಾಬ್ದಾರಿ ರಿಷಭ್ ಪಂತ್ ಹೆಗಲಿಗೆ ಬಿದ್ದಿದೆ. ಈ ಮೂಲಕ ಟೀಮ್ ಇಂಡಿಯಾ ಬಹುತೇಕ ಯುವ ಆಟಗಾರರಿಂದ ಕೂಡಿದ್ದರೆ, ಈ ಸರಣಿಯಲ್ಲಿ ಕಣಕ್ಕಿಳಿಯುತ್ತಿರುವ ಓರ್ವ ಆಟಗಾರ ಮಾತ್ರ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಪ್ರಥಮ ಟಿ20 ಪಂದ್ಯದಲ್ಲಿಯೂ ಕಣಕ್ಕಿಳಿದಿದ್ದರು. ಆ ಆಟಗಾರನ ಕುರಿತ ವಿವರ ಮುಂದೆ ಇದೆ ಓದಿ.

ಅಂದು ತಂಡದಲ್ಲಿದ್ದ, ಇಂದು ತಂಡದಲ್ಲಿರುವ ಏಕೈಕ ಆಟಗಾರ ಈತ
2006ರ ಸಮಯದಲ್ಲಿ ಆಗತಾನೆ ಈ ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಶುರುವಾಗಿತ್ತು. ಆ ಸಂದರ್ಭದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಆಯೋಜನೆಯಾಗಿದ್ದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಕೂಡ ಸ್ಥಾನ ಪಡೆದುಕೊಂಡಿದ್ದರು. ಅಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಇದೀಗ ಈ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿಯೂ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಅಂದು ಇಂದು ಭಾರತ ತಂಡದಲ್ಲಿ ಆಟಗಾರನಾಗಿರುವ ಏಕೈಕ ವ್ಯಕ್ತಿ ಎಂದರೆ ಅದು ದಿನೇಶ್ ಕಾರ್ತಿಕ್.

ಅಂದು ಪ್ರಕಟವಾಗಿದ್ದ ಭಾರತ ತಂಡ
2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಆಡುವ ಬಳಗ: ವಿರೇಂದ್ರ ಸೆಹ್ವಾಗ್ ( ನಾಯಕ ), ಸಚಿನ್ ತೆಂಡೂಲ್ಕರ್, ದಿನೇಶ್ ಮೊಂಗಿಯಾ, ಎಂ ಎಸ್ ಧೋನಿ, ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಶ್ರೀಶಾಂತ್, ಜಹೀರ್ ಖಾನ್ ಮತ್ತು ಅಜಿತ್ ಅಗರ್ಕರ್.

ಈ ಸರಣಿಯ ತಂಡ
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ಉಪನಾಯಕ ), ವೆಂಕಟೇಶ್ ಅಯ್ಯರ್, ವೈ ಚಾಹಲ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್ , ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications