ವಿಶ್ವಕಪ್ ಟಿ20 ತಂಡದಲ್ಲಿ ಸ್ಥಾನ ಪಡೆದ ನಂತರ ದಿನೇಶ್ ಕಾರ್ತಿಕ್ ಮೊದಲ ಪ್ರತಿಕ್ರಿಯೆ
ದಿನೇಶ್ ಕಾರ್ತಿಕ್, ಸದ್ಯ ಭಾರತದ ಕ್ರಿಕೆಟ್ ಜಗತ್ತಿನಲ್ಲಿ ಹಲವರಿಗೆ ಸ್ಫೂರ್ತಿಯಾಗುವ ಹೆಸರು. ಎಲ್ಲಾ ಕ್ರಿಕೆಟಿಗರು ನಿವೃತ್ತಿಯಾಗಲು ಯೋಚಿಸುವ ವಯಸ್ಸಿನಲ್ಲಿ ಈ ಹಠವಾದಿ ಮಾತ್ರ ಭಾರತ ತಂಡಕ್ಕಾಗಿ ಆಡಬೇಕು ಎಂದು ಆಸೆಪಟ್ಟ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾದ, ಅಲ್ಲೂ ಅದ್ಭುತ ಪ್ರದರ್ಶನ ನೀಡಿ ಕೊನೆಗೂ ತನ್ನ ಕನಸು ನನಸು ಮಾಡಿಕೊಂಡರು.
ಈಗ ತನ್ನ ಬಹಳ ದಿನದ ಕನಸನ್ನು ಕೂಡ ನನಸಾಗಿಸಿಕೊಂಡಿದ್ದಾರೆ. ಹೌದು, ದಿನೇಶ್ ಕಾರ್ತಿಕ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೋಮವಾರ ಬಿಸಿಸಿಐ ಮುಂದಿನ ವಿಶ್ವಕಪ್‌ಗಾಗಿ ತಂಡವನ್ನು ಪ್ರಕಟಿಸಿದ್ದು, ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ 15 ಸದಸ್ಯರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಬಹಳ ದಿನಗಳ ಕನಸು ನನಸಾದ ಬಳಿಕ ತನ್ನ ಸಂತೋಷವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ದಿನೇಶ್ ಕಾರ್ತಿಕ್, ಕನಸು ನನಸಾಗಿದೆ ಎಂದು ಬರೆದುಕೊಂಡಿದ್ದಾರೆ, ಅದರಲ್ಲಿ ನೀಲಿ ಬಣ್ಣದ ಹೃದಯದ ಸಂಕೇತವನ್ನು ಹಂಚಿಕೊಂಡಿದ್ದು, ಭಾರತ ತಂಡವನ್ನು ಪ್ರತಿನಿಧಿಸುತ್ತದೆ. ಇದು ದಿನೇಶ್ ಕಾರ್ತಿಕ್‌ಗೆ ಮಾತ್ರವಲ್ಲ ಅವರ ಆಟವನ್ನು ಮೆಚ್ಚಿಕೊಂಡ ಅಭಿಮಾನಿಗಳಿಗೂ ಸಖತ್ ಖುಷಿ ನೀಡಿದೆ.

2007ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ದಿನೇಶ್ ಕಾರ್ತಿಕ್
2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ದಿನೇಶ್ ಕಾರ್ತಿಕ್, 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.
ಮೊದಲ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಯುವ ಆಟಗಾರನಾಗಿದ್ದ ದಿನೇಶ್ ಕಾರ್ತಿಕ್, ಬರೋಬ್ಬರಿ 15 ವರ್ಷಗಳ ನಂತರವೂ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರಮ ಹಾಕಿದರೆ ಯಾವುದೂ ಅಸಾಧ್ಯವಲ್ಲ ಎಂದು ಅವರು ತೋರಿಸಿಕೊಟ್ಟಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್ ಯಾಕಿರಬೇಕು?: ಇಲ್ಲಿದೆ ಕಾರಣ

ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿ
ಟಿ20 ವಿಶ್ವಕಪ್‌ನಲ್ಲಿ ಆಡಬೇಕು ಎಂದು ಮೊದಲಿನಿಂದಲೂ ಆಶಿಸಿದ್ದ ದಿನೇಶ್ ಕಾರ್ತಿಕ್, ಅದಕ್ಕೆ ತಕ್ಕಂತೆ ತರಬೇತಿಯನ್ನು ಪಡೆದುಕೊಂಡಿದ್ದರು. 2022ರ ಐಪಿಎಲ್‌ನಲ್ಲಿ ಆರ್ ಸಿಬಿ ಪರವಾಗಿ ಆಡಿದ್ದ ದಿನೇಶ್ ಕಾರ್ತಿಕ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಅದರಲ್ಲೂ ಕೊನೆಯ ಓವರ್ ಗಳಲ್ಲಿ ವೇಗವಾಗಿ ರನ್ ಗಳಿಸುವ ಮೂಲಕ ಉತ್ತಮ ಫಿನಿಷರ್ ಎನಿಸಿಕೊಂಡಿದ್ದರು.
ಆಗಲೇ ನಾನು ಭಾರತ ತಂಡಕ್ಕೆ ಆಡಬೇಕು, ವಿಶ್ವಕಪ್‌ನಲ್ಲಿ ಆಡುವುದು ನನ್ನ ಗುರಿ ಎಂದು ಹೇಳಿಕೊಂಡಿದ್ದರು. ಐಪಿಎಲ್ ಮುಗಿದ ನಂತರ ದಿನೇಶ್ ಕಾರ್ತಿಕ್ ಭಾರತ ತಂಡಕ್ಕೆ ವಾಪಸಾದರು. ಮೂರು ವರ್ಷಗಳ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ ಮರಳಿದರು.

ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಆಯ್ಕೆ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾದ ದಿನೇಶ್ ಕಾರ್ತಿಕ್ ಆಯ್ಕೆದಾರರನ್ನು ನಿರಾಸೆಗೊಳಿಸಲಿಲ್ಲ. ಟೀಂ ಇಂಡಿಯಾ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಅವರು ಪ್ರದರ್ಶನ ನೀಡಿದರು. ವಿಶ್ವಕಪ್ ಟಿ20ಗೂ ಮುನ್ನ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ದಿನೇಶ್ ಕಾರ್ತಿಕ್ ಆಡಲಿದ್ದಾರೆ.
2022 ರ ಏಷ್ಯಾ ಕಪ್ ಸಮಯದಲ್ಲಿ ಕಾರ್ತಿಕ್ ಹೆಚ್ಚು ಆಡಲು ಸಾಧ್ಯವಾಗಲಿಲ್ಲ, ಆದರೆ ಮುಂಬರುವ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್‌ನಲ್ಲಿ ತಮ್ಮ ಪಾತ್ರವೇನು ಎಂದು ಅವರು ಸಾಬೀತು ಮಾಡಬೇಕಿದೆ.

ಧೋನಿ ದಾಖಲೆ ಮುರಿದ ಡಿಕೆ
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ್ದ ದಿನೇಶ್ ಕಾರ್ತಿಕ್ ಹೊಸ ದಾಖಲೆ ಬರೆದಿದ್ದಾರೆ. 37 ವರ್ಷ, 16 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸಿದ್ದ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 50 ರನ್ ಗಡಿ ದಾಟಿದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 50 ರನ್ ಸಿಡಿಸಿದಾಗ ಎಂಎಸ್ ಧೋನಿಗೆ 36 ವರ್ಷ, 229 ದಿನಗಳು. 2020 ರಲ್ಲಿ 35 ವರ್ಷ ವಯಸ್ಸಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಧ ಶತಕ ಸಿಡಿಸಿದ ಶಿಖರ್ ಧವನ್ ಈ ಸಾಧನೆ ಮಾಡಿದ ಮೂರನೇ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಎಲ್ಲಾ ಆಟಗಾರರು ಬಹುತೇಕ ನಿವೃತ್ತರಾಗುವ ವಯಸ್ಸಿನಲ್ಲಿ ದಿನೇಶ್ ಕಾರ್ತಿಕ್ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ದಿನೇಶ್ ಕಾರ್ತಿಕ್ ಭಾರತೀಯ ಕ್ರಿಕೆಟ್ ಲೋಕದಲ್ಲಿ ಹಲವು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications