
"2007ರಲ್ಲಿ ಅನುಭವಿಗಳು ಮಾಡಿದ ನಿರ್ಧಾರ ಕೊಹ್ಲಿ, ರೋಹಿತ್ ಮಾಡಲಿ"
ಕ್ರಿಕೆಟ್ ವಿಶ್ಲೇಷಕ ಅರುಣ್ ಗೋಪಾಲಕೃಷ್ಣನ್ ಎಂಬವರು ಟ್ವಿಟ್ಟರ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದರು. 2007ರ ಟಿ20 ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಇತರ ಅನುಭವಿ ಆಟಗಾರರು ಟಿ20 ವಿಶ್ವಕಪ್‌ನ ಭಾಗವಾಗದಿರಲು ನಿರ್ಧರಿಸಿದ್ದರು. ಅದೇ ರೀತಿಯಾಗಿ ಕಳಪೆ ಫಾರ್ಮ್‌ನಲ್ಲಿರುವ ಕಾರಣದಿಂದಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ತಾವಾಗಿಯೇ ಹಿಂದಕ್ಕೆ ಸರಿಯಲಿ" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದು ಅಸಂಭವ ಎಂದ ದೊಡ್ಡ ಗಣೇಶ್
ಈ ಟ್ವೀಟ್‌ಗೆ ದೊಡ್ಡ ಗಣೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ನಿರ್ಧಾರವನ್ನು ನಿರೀಕ್ಷಿಸುವುದು ಅಸಾಧ್ಯ ಎಂದಿರುವ ದೊಡ್ಡ ಗಣೇಶ್ ಅದಕ್ಕೆ ಕಾರಣವನ್ನೂ ನೀಡಿದ್ದಾರೆ. 2007ರಲ್ಲಿ ಇದ್ದ ಪರಿಸ್ಥಿತಿ ಹಾಗೂ ಈಗಿನ ಸ್ಥಿತಿ ಭಿನ್ನವಾಗಿದ್ದು ಈ ಹಂತದಲ್ಲಿ ವಿರಾಟ್ ಹಾಗೂ ರೋಹಿತ್ ಶರ್ಮಾ ಅವರಿಂದ ಆ ರೀತಿಯ ನಿರ್ಧಾರ ನಿರೀಕ್ಷಿಸುವುದು ಅಸಾಧ್ಯ ಎಂದಿದ್ದಾರೆ ದೊಡ್ಡ ಗಣೇಶ್.

"ಟಿ20 ಮಾದರಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ"
ಟಿ20 ವಿಶ್ವಕಪ್‌ನಿಂದ ಹಿಂದಕ್ಕೆ ಸರಿಯುವ ಚರ್ಚೆಗೆ ದೊಡ್ಡ ಗಣೇಶ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. "ಇದನ್ನು ನಿರೀಕ್ಷಿಸುವುದು ಅಸಾಧ್ಯ. 2007ರಲ್ಲಿ ಹಿರಿಯ ಆಟಗಾರರು ಟಿ20 ಮಾದರಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಟಿ20 ವಿಶ್ವಕಪ್‌ನಿಂದ ಅನುಭವಿ ಆಟಗಾರರು ಹಿಂದಕ್ಕೆ ಸರಿಯಲು ಅದೇ ಪ್ರಮುಖ ಕಾರಣವಾಗಿತ್ತು. ಆದರೆ ಈಗ ಟಿ20 ವಿಶ್ವಕಪ್‌ನ ಗಾತ್ರ ದೊಡ್ಡದಾಗಿದೆ. ಇದನ್ನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಳೆದುಕೊಳ್ಳಲು ಇಚ್ಚಿಸುವುದಿಲ್ಲ" ಎಂದಿದ್ದಾರೆ ದೊಡ್ಡ ಗಣೇಶ್.

ವರ್ಷಾಂತ್ಯದಲ್ಲಿ ನಡೆಯಲಿದೆ ಟಿ20 ವಿಶ್ವಕಪ್
ಈ ಬಾರಿ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅಕ್ಟೋಬರ್ ನವೆಂಬರ್ ಅವಧಿಯಲ್ಲಿ ಈ ಪ್ರತಿಷ್ಟಿತ ಟೂರ್ನಮೆಂಟ್ ನಡೆಯಲಿದ್ದು ಎಲ್ಲಾ ತಂಡಗಳು ತೀವ್ರ ಪೈಪೋಟಿ ನಡೆಸಲಿದೆ. ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವೇ ಚಾಂಪಿಯನ್ ಆಗಿದ್ದು ತೀವ್ರ ಕುತೂಹಲ ಮೂಡಿಸಿದೆ. ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಫಾರ್ಮ್ ಕಳೆದುಕೊಂಡಿರುವುದು ತಂಡದ ಮ್ಯಾನೇಜ್‌ಮೆಂಟ್‌ನ ಚಿಂತೆ ಹೆಚ್ಚಿಸಿದೆ. ಟಿ20 ವಿಶ್ವಕಪ್‌ಗೆ ಮುನ್ನ ನಡೆಯಲಿರುವ ಕೆಲ ಸರಣಿಗಳು ಭಾರತಕ್ಕೆ ಬಹಳ ಪ್ರಮುಖ ಎಂಬುದು ಸ್ಪಷ್ಟ.


Click it and Unblock the Notifications
