
ನವದೆಹಲಿ, ಮೇ 16: ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ರಾಯಲ್ಸ್ ತಂಡದ ಪ್ರಬಲ ಆಟಗಾರರಾದ ಜಾಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ತಮ್ಮ ತವರಾದ ಇಂಗ್ಲೆಂಡ್ ಗೆ ಹೊರಟು ನಿಂತಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಪಾಕಿಸ್ಥಾನ ಟೆಸ್ಟ್ ಸೀರೀಸ್ ಗಾಗಿ ತಂಡವನ್ನು ಪ್ರಕಟಿಸಿದ್ದು, ಆಯ್ಕೆ ಸಮಿತಿಯು ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಬ್ಯಾಟ್ಸ್ಮನ್-ವಿಕೆಟ್ ಕೀಪರ್ ಜಾಸ್ ಬಟ್ಲರ್ ಅವರನ್ನು ಮರಳಿ ತಂಡಕ್ಕೆ ಸೇರಿಕೊಳ್ಳುವಂತೆ ಸೂಚಿಸಿದೆ.
ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಮೇ 24ರಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಇಂಗ್ಲೆಂಡ್ ತಂಡವನ್ನು ಬಟ್ಲರ್, ಸ್ಟೋಕ್ಸ್ ಸೇರಿಕೊಳ್ಳಬೇಕಾಗಿದೆ. ಸದ್ಯ ಇಬ್ಬರೂ ರಾಜಸ್ಥಾನ್ ತಂಡದಲ್ಲಿ ಆಡುತ್ತಿರುವುದರಿಂದ ರಾಜಸ್ಥಾನ್ ತಂಡಕ್ಕೆ ನಿಜಕ್ಕೂ ಇದು ದೊಡ್ಡ ಹೊಡೆತ ನೀಡಿದೆ.
ಮಂಗಳವಾರ ನಡೆದಿದ್ದ ರಾಜಸ್ಥಾನ್-ಕೋಲ್ಕತ್ತಾ ಪಂದ್ಯದಲ್ಲಿ ಕೋಲ್ಕತ್ತಾ 6 ವಿಕೆಟ್ ಗೆಲುವು ದಾಖಲಿಸಿತ್ತು. ಈ ಸಂದರ್ಭ ಬಟ್ಲರ್ 39 (22) ರನ್ ಮೂಲಕ ತಂಡವನ್ನು ಬೆಂಬಲಿಸಲು ಯತ್ನಿಸಿದ್ದರಾದರೂ ಇತರ ಬ್ಯಾಟ್ಸ್ಮನ್ ಗಳ ಸಹಕಾರವಿಲ್ಲದೆ ರಾಜಸ್ಥಾನ್ ಸೋಲೊಪ್ಪಿಕೊಂಡಿತ್ತು.
ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಬಟ್ಲರ್ ಅವರದ್ದೇ ಗರಿಷ್ಠ ರನ್. ಇನ್ನು ಸ್ಟೋಕ್ಸ್ ಕೂಡ ರಾಜಸ್ಥಾನ್ ಗೆ 11 ರನ್ ಸಣ್ಣ ಕೊಡುಗೆ ನೀಡಿದ್ದರೂ 15 ರನ್ ಗೆ 3 ವಿಕೆಟ್ ಕಬಳಿಸಿ ಕೋಲ್ಕತ್ತಾಕ್ಕೆ ತಡೆಯೊಡ್ಡಲು ಯತ್ನಿಸಿದರು. ಆದರೆ ಕಡೆಗೆ ರಾಜಸ್ಥಾನ ತಲೆಬಾಗಲೇ ಬೇಕಾಯಿತು.
ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ವಿರುದ್ಧದ ಪಂದ್ಯದ ಬಳಿಕ ಸ್ಟೋಕ್ಸ್, ಬಟ್ಲರ್ ಇಬ್ಬರಿಗೂ ಭಾವುಕ ವಿದಾಯ ನೀಡಿದೆ. ತಂಡದ ಆಟಗಾರರೊಂದಿಗೆ ಆತ್ಮೀಯವಾಗಿ ಬೆರೆತಿದ್ದ ಇಬ್ಬರೂ ನೆಚ್ಚಿನ ಆಟಗಾರನ್ನು ರಾಜಸ್ಥಾನ್ ರಾಯಲ್ಸ್ ಪ್ರೀತಿಯಿಂದ ಕಳುಹಿಸಿ ಕೊಟ್ಟಿದೆ.