
ಒಂದೆಡೆ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿ ಸದ್ದು ಮಾಡುತ್ತಿದೆ. ಹೌದು, ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದು ೫ ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ. ಇನ್ನು ಇತ್ತಂಡಗಳ ನಡುವೆ ಮೊದಲಿಗೆ ನಡೆದ ೫ ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 3-2 ಅಂತರದಿಂದ ಗೆದ್ದ ವೆಸ್ಟ್ ಇಂಡೀಸ್ ಸದ್ಯ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮಾರ್ಚ್ ೮ರ ರಾತ್ರಿ 7.30ಕ್ಕೆ ( ಭಾರತೀಯ ಕಾಲಮಾನದ ಪ್ರಕಾರ ) ಅಂಟಿಗುವಾದ ನಾರ್ಥ್ ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಮ್‌ನಲ್ಲಿ ಆರಂಭಗೊಂಡಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.
ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರರಾದ ಅಲೆಕ್ಸ್ ಲೀಸ್ ೪ ರನ್ ಗಳಿಸಿ ಔಟ್ ಆದರೆ, ಜಾಕ್ ಕ್ರಾವ್ಲಿ ೮ ರನ್ ಗಳಿಸಿ ಔಟ್ ಆದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಜೋರೂಟ್ ೧೩ ರನ್, ಡೇನಿಯಲ್ ಲಾರೆನ್ಸ್ ೨೦ ರನ್, ಬೆನ್ ಸ್ಟೋಕ್ಸ್ ೩೬ ರನ್ ಮತ್ತು ಬೆನ್ ಫೋಕ್ಸ್ ೪೨ ರನ್ ಗಳಿಸಿದರು. ಹೀಗೆ ಇಂಗ್ಲೆಂಡ್ ತನ್ನ ಮೊದಲ ೪ ವಿಕೆಟ್‌ಗಳನ್ನು ೪೮ ರನ್‌ಗಳಿಗೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಕಣಕ್ಕಿಳಿದ ಜಾನಿ ಬೈರ್‌ಸ್ಟೋ ಮೊದಲ ದಿನದಾಟದಂತ್ಯಕ್ಕೆ ಅಜೇಯ ೧೦೯ ರನ್ ಗಳಿಸಿದ್ದಾರೆ ಹಾಗೂ ಅಜೇಯ ೨೪ ರನ್ ಗಳಿಸಿರುವ ಕ್ರಿಸ್ ವೋಕ್ಸ್ ಜಾನಿ ಬೈರ್‌ಸ್ಟೋಗೆ ಸಾಥ್ ನೀಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ೬ ವಿಕೆಟ್ ಕಳೆದುಕೊಂಡು ೨೬೮ ರನ್ ಗಳಿಸಿದೆ. ಅತ್ತ ವೆಸ್ಟ್ ಇಂಡೀಸ್ ತಂಡದ ಪರ ಕೆಮರ್ ರೋಚ್, ಜೇಡನ್ ಸೀಲ್ಸ್ ಮತ್ತು ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್ ಪಡೆದರು.
ಹೀಗೆ ಮೊದಲ ದಿನದ ಆರಂಭದಲ್ಲಿ ಮುಗ್ಗರಿಸಿದ್ದ ಇಂಗ್ಲೆಂಡ್ ತಂಡ ಜಾನಿ ಬೈರ್‌ಸ್ಟೋ ಆಕರ್ಶಕ ಶತಕದ ನೆರವಿನಿಂದ ದಿನದಾಟದಂತ್ಯಕ್ಕೆ ಉತ್ತಮ ಹಂತ ತಲುಪಿದ್ದು ಇಂದು ಸಂಜೆ ೭.೩೦ಕ್ಕೆ ಆರಂಭವಾಗಲಿರುವ ಎರಡನೇ ದಿನದಾಟದಲ್ಲಿ ಇದೇ ರೀತಿ ಉತ್ತಮ ರನ್ ಕಲೆಹಾಕುತ್ತಾ ಅಥವಾ ಬೇಗನೇ ವಿಕೆಟ್ ಕಳೆದುಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜಾನ್ ಕ್ಯಾಂಪ್‌ಬೆಲ್, ಶಮರ್ ಬ್ರೂಕ್ಸ್, ಎನ್ಕ್ರುಮಾ ಬೋನರ್, ಜರ್ಮೈನ್ ಬ್ಲಾಕ್‌ವುಡ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಕೆಮರ್ ರೋಚ್, ಅಲ್ಜಾರಿ ಜೋಸೆಫ್, ವೀರಸಾಮಿ ಪರ್ಮಾಲ್ ಮತ್ತು ಜೇಡನ್ ಸೀಲ್ಸ್
ಇಂಗ್ಲೆಂಡ್ ಆಡುವ ಬಳಗ: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಜೋ ರೂಟ್ (ನಾಯಕ), ಡೇನಿಯಲ್ ಲಾರೆನ್ಸ್, ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಮಾರ್ಕ್ ವುಡ್ ಮತ್ತು ಜ್ಯಾಕ್ ಲೀಚ್
ಜಾನಿ ಬೈರ್‌ಸ್ಟೋ ಅಜೇಯ ಶತಕದ ನೆರವಿನಿಂದ ಉತ್ತಮ ಹಂತ ತಲುಪಿದ ಇಂಗ್ಲೆಂಡ್