ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ, ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಗೆದ್ದುಕೊಂಡಿದೆ. ಗುರುವಾರ, ಆಗಸ್ಟ್ 3ರಿಂದ ಆತಿಥೇಯ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯತ್ತ ಗಮನ ಹರಿಸಿದೆ.
ಇದೀಗ ಸಂಜು ಸ್ಯಾಮ್ಸನ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಂಪೂರ್ಣವಾಗಿ ಸಿದ್ಧಗೊಂಡಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗೆ ಭಾರತದ ಅಂತಿಮ 15ರಲ್ಲಿರಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಟ್ರಿನಿಡಾಡ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯವನ್ನು ಸಂಜು ಸ್ಯಾಮ್ಸನ್ ಒತ್ತಡದಲ್ಲಿ ಆಡಿ ಪರಿಣಾಮಕಾರಿ ಅರ್ಧಶತಕ ಬಾರಿಸಿದರು.
ಭಾರತ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಜೊತೆಗೆ ಮಧ್ಯಮ ಕ್ರಮಾಂಕದ ಸ್ಥಾನಕ್ಕಾಗಿ ಹೋರಾಡುತ್ತಿರುವ ಸಂಜು ಸ್ಯಾಮ್ಸನ್, ತನ್ನ ಸಾಮರ್ಥ್ಯ ಸಾಬೀತುಪಡಿಸಲು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ ಅದ್ಭುತವಾಗಿ ಆಡಿದರು.
ಇನ್ನು ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಭಾರತ ತಂಡದಿಂದ ಹೊರಗುಳಿದಿದ್ದು, ಕೆರಿಬಿಯನ್ ನಾಡಿನಲ್ಲಿ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರಿಗೆ ಅವಕಾಶ ನೀಡಿತು.

ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡ ಆಗಾಗ ನಿಧಾನ ಪ್ರದರ್ಶನ ನೀಡುತ್ತದೆ ಮತ್ತು ಸಂಜು ಸ್ಯಾಮ್ಸನ್ ಆ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಮೊಹಮ್ಮದ್ ಕೈಫ್ ಭಾವಿಸಿದ್ದಾರೆ.
"ನಾನು ಸಂಜು ಸ್ಯಾಮ್ಸನ್ ಆಟದಿಂದ ಪ್ರಭಾವಿತನಾಗಿದ್ದೇನೆ. ಆತ ಪರಿಣಾಮಕಾರಿ ಪ್ರದರ್ಶನ ನೀಡಿದರು. ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಈ ಹಿಂದೆ ಅದನ್ನು ಮಾಡಿದ್ದಾರೆ," ಎಂದು ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಅಕ್ಷರ್ ಪಟೇಲ್ ಆಡಿಸುವುದು ಮೊಹಮ್ಮದ್ ಕೈಫ್‌ಗೆ ಇಷ್ಟವಾಗಲಿಲ್ಲ.
"ಇಶಾನ್ ಕಿಶನ್ ಅಥವಾ ಅಕ್ಷರ್ ಪಟೇಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಳುಹಿಸುವುದು ಉತ್ತಮ ಉಪಾಯವಲ್ಲ. ಎಡಗೈ ಸ್ಪಿನ್ ಮತ್ತು ಲೆಗ್ ಸ್ಪಿನ್ ಎದುರಿಸುವ ಸಂಜು ಸ್ಯಾಮ್ಸನ್ ಅವರಂತಹ ಆಟಗಾರರು ಬೇಕು. ಮೂರನೇ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್ ಒತ್ತಡದಲ್ಲಿ ಪ್ರದರ್ಶನ ನೀಡಿದರು ಮತ್ತು ಅವರು ವಿಶ್ವಕಪ್‌ಗೆ ಸಿದ್ಧರಾಗಿದ್ದಾರೆ," ಎಂದು ಮೊಹಮ್ಮದ್ ಕೈಫ್ ತಿಳಿಸಿದರು.
ವಿಶ್ವಕಪ್ ಗೆಲ್ಲಲು ಭಾರತಕ್ಕೆ ಸಂಪೂರ್ಣ ಫಿಟ್ ಆಗಿರುವ ಜಸ್ಪ್ರೀತ್ ಬುಮ್ರಾ ಅಗತ್ಯ
ಆಗಸ್ಟ್ ಅಂತ್ಯದಲ್ಲಿ ಐರ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಅವರ ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ, ಸುಮಾರು ಒಂದು ವರ್ಷದ ಬಳಿಕ ಕ್ರಿಕೆಟ್‌ನಿಂದ ಹೊರಗುಳಿದ ಬಳಿಕ ಅವರ ಪುನರಾಗಮನದ ಸರಣಿಯಾಗಿದೆ.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ನಾಕೌಟ್ ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಇಲ್ಲದೆ ಹೋರಾಟ ನಡೆಸಿತು ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
"2023ರ ವಿಶ್ವಕಪ್‌ನಲ್ಲಿ ಭಾರತದ ಅವಕಾಶಗಳು ಗಾಯಗೊಂಡ ಆಟಗಾರರ ಪುನರಾಗಮನದ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಸುದೀರ್ಘ ಗಾಯದ ನಂತರ ಜಸ್ಪ್ರೀತ್ ಬುಮ್ರಾ ಈಗ ಆಡುತ್ತಿದ್ದಾರೆ ಮತ್ತು ಅವರು ಎಷ್ಟು ಫಿಟ್ ಆಗಿದ್ದಾರೆ ಎಂಬುದರ ಕುರಿತು ನಾವು ನೋಡಬೇಕಾಗಿದೆ," ಎಂದರು.
"ತವರಿನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಭಾರತಕ್ಕೆ ಸಂಪೂರ್ಣ ಫಿಟ್ ಆಗಿರುವ ಜಸ್ಪ್ರೀತ್ ಬುಮ್ರಾ ಅಗತ್ಯವಿದೆ. ಬೌಲಿಂಗ್ ವಿಭಾಗದಲ್ಲಿ ನೀವು ಎರಡು ತಂಡಗಳನ್ನು ಹೊಂದಲು ಸಾಧ್ಯವಿಲ್ಲ. ಜಸ್ಪ್ರೀತ್ ಬುಮ್ರಾ ಆಡದಿದ್ದರೆ ನಾವು 2022ರ ಏಷ್ಯಾ ಕಪ್, 2022ರ ಟಿ20 ವಿಶ್ವಕಪ್‌ನಲ್ಲಿ ಸೋಲಬೇಕಾಯಿತು," ಎಂದು ಮೊಹಮ್ಮದ್ ಕೈಫ್ ಹೇಳಿದರು.
"ಈ ಸಮಯದಲ್ಲಿ ಭಾರತ ತಂಡವು ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವ ಕಾರಣ, ಕಾಗದದ ಮೇಲೆ ಬಲಶಾಲಿಯಾಗಿ ಕಾಣುತ್ತಿಲ್ಲ," ಎಂದು 42 ವರ್ಷದ ಮೊಹಮ್ಮದ್ ಕೈಫ್ ತಿಳಿಸಿದರು.