ಟೀಮ್ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ (ECB) ನಡೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಂಡರ್ಸನ್ ಹಾಗೂ ತೆಂಡೂಲ್ಕರ್ ಹೆಸರನ್ನು ಇಡಲಾಗತ್ತು. ಆದರೆ ಪ್ರಶಸ್ತಿ ಸಮಾರಂಭದಲ್ಲಿ ಈ ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲೇ ಇಲ್ಲ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.
ಇದೇ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿಯ ವೇಳೆಯೂ ಗವಾಸ್ಕರ್ ಇಂತಹದ್ದೇ ಪ್ರಶ್ನೆ ಎತ್ತಿದ್ದರು. ಆಂಡರ್ಸನ್, ತೆಂಡೂಲ್ಕರ್ ಇಬ್ಬರೂ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಇಂಗ್ಲೆಂಡ್‌ನಲ್ಲೇ ಇದ್ದರು. ಅವರನ್ನು ಕರಿಯಬಹುದಿತ್ತು ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.

ಭಾರತ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಐದು ಪಂದ್ಯಗಳಲ್ಲಿ 2-2ರಿಂದ ಡ್ರಾ ಸಾಧಿಸಿತು. ಓವಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ 374 ರನ್ ಗುರಿಯನ್ನು ಆತಿಥೇಯ ತಂಡಕ್ಕೆ ನೀಡಿತು. ಅಲ್ಲದೆ ಪಂದ್ಯದ ಕೊನೆಯ ದಿನ ಇಂಗ್ಲೆಂಡ್ ಗೆಲುವಿಗೆ 35 ರನ್ ಹಾಗೂ ಭಾರತದ ಗೆಲುವಿಗೆ 4 ವಿಕೆಟ್ ಬೇಕಿತ್ತು. ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ಸರಣಿಯಲ್ಲಿ ಸಮಬಲ ಸಾಧಿಸಿದೆ. ಇಂಗ್ಲೆಂಡ್ ಲೀಡ್ಸ್ ಹಾಗೂ ಲಾರ್ಡ್ಸ್‌ನಲ್ಲಿ ಜಯ ಸಾಧಿಸಿದ್ದರೆ, ಭಾರತ ಬರ್ಮಿಂಗ್‌ಹ್ಯಾಮ್ ಹಾಗೂ ಓವಲ್‌ನಲ್ಲಿ ಜಯ ಸಾಧಿಸಿತ್ತು.
"ಇದೇ ಮೊದಲಬಾರಿಗೆ ಈ ಸರಣಿಗೆ ಸಚಿನ್ ತೆಂಡೂಲ್ಕರ್ ಹಾಗೂ ಜೇಮ್ಸ್ ಆಂಡರ್ಸನ್ ಅವರ ಹೆಸರನ್ನು ಇಡಲಾಗಿತ್ತು. ಇವರಿಬ್ಬರೂ ತಮ್ಮ ತಮ್ಮ ದೇಶದ ಪರ ಅಮೋಘ ಸಾಧನೆ ಮಾಡಿರುವ ಆಟಗಾರರು. ಇವರಿಬ್ಬರೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪಸ್ಥಿತರಿದ್ದು, ಟ್ರೋಫಿ ನೀಡಬೇಕಿತ್ತು. ನನ್ನ ತಿಳುವಳಿಕೆಯಂತೆ ಇವರಿಬ್ಬರೂ ಆಟಗಾರರು ಆ ಸಮಯದಲ್ಲಿ ಇಂಗ್ಲೆಂಡ್‌ನಲ್ಲೇ ಇದ್ದರು. ಅವರಿಗೆ ಆಮಂತ್ರಣ ನೀಡಿದ್ದರೆ ಅವರು ಬರುತ್ತಿದ್ದರು ಎಂದು ಗವಾಸ್ಕರ್ ತಿಳಿಸಿದ್ದಾರೆ.
ಇನ್ನು ಈ ಸರಣಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡಕ್ಕೆ ಪಟೌಡಿ ಪದಕವನ್ನು ನೀಡಲು ಈ ಮೊದಲೇ ಇಸಿಬಿ ನಿರ್ಧರಿಸಿತ್ತು. ಅದರಂತೆ ಬೆನ್ ಸ್ಟೋಕ್ಸ್ ಹಾಗೂ ಗಿಲ್ ಗೆ ಈ ಪದಕವನ್ನು ನೀಡಿ ಗೌರವಿಸಲಾಯಿತು. ಈ ಬಗ್ಗೆಯೂ ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ. ಪಟೌಡಿ ಪುರಸ್ಕಾರವನ್ನು ಸರಣಿ ಶ್ರೇಷ್ಠ ಆಟಗಾರನಿಗೆ ಅಥವಾ ವಿಜೇತ ನಾಯಕನಿಗೆ ನೀಡಿದ್ದರೆ ಒಳ್ಳೆಯದಿತ್ತು ಎಂದು ಗವಾಸ್ಕರ್ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಪ್ರತಿ ಬಾರಿ ಸರಣಿ ಡ್ರಾ ಆದಾಗ ಈ ಪದಕವನ್ನು ಹಂಚಲು ಸಾಧ್ಯವಿಲ್ಲ ಅಲ್ಲವೇ. ಹೀಗಾಗಿ ಸರಣಿ ಶ್ರೇಷ್ಠ ಆಟಗಾರನಿಗೆ ಈ ಪದಕ ನೀಡಿದ್ದೇ ಒಳ್ಳೆಯದಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ. ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಶುಭಮನ್ ಗಿಲ್ ಹಾಗೂ ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು.