
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಕೆಟ್ಟ ಆರಂಭ ಪಡೆದಿದ್ದು, ಮೊದಲ ಪಂದ್ಯದ, ಮೊದಲ ಎಸೆತದಲ್ಲೇ ಗೋಲ್ಡನ್ ಡಕೌಟ್ ಆಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ನಾಯಕ ಕೆ.ಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಓಪನಿಂಗ್ ಬ್ಯಾಟಿಂಗ್ ಇಳಿದರು.
ಗುಜರಾತ್ ಪರ ಮೊದಲ ಓವರ್‌ನಲ್ಲಿ ಬೌಲಿಂಗ್ ಇಳಿದ ಅನುಭವಿ ವೇಗಿ ಮೊಹಮ್ಮದ್ ಶಮಿರ ಮೊದಲ ಎಸೆತದ ಚೆಂಡು ಕೆ.ಎಲ್ ರಾಹುಲ್ ಬ್ಯಾಟ್ ಸವರಿಕೊಂಡು ಹೋಗಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಕೈ ಸೇರಿತು. ಆದ್ರೆ ಆನ್‌ಫೀಲ್ಡ್ ಅಂಪೈರ್ ಯಾವುದೇ ತೀರ್ಪು ನೀಡಲಿಲ್ಲ. ಹೀಗಾಗಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಥರ್ಡ್ ಅಂಪೈರ್ ರಿವ್ಯೂ ತೆಗೆದುಕೊಂಡರು.
ರಿವ್ಯೂನಲ್ಲಿ ಮೇಲ್ನೋಟಕ್ಕೆ ಚೆಂಡು ಬ್ಯಾಟ್ ಸಮೀಪವೇ ಸಾಗಿದ್ದು ಕಂಡುಬಂದಿತು. ನಂತರದಲ್ಲಿ ಅಲ್ಟ್ರಾ ಎಡ್ಜ್‌ನಲ್ಲಿ ಸ್ಪಷ್ಟವಾಗಿ ಚೆಂಡು ಬ್ಯಾಟ್‌ಗೆ ಸವರಿಕೊಂಡು ಹೋಗಿರುವುದು ಕಂಡುಬಂದಿತು. ಪರಿಣಾಮ ಅಂಪೈರ್ ತನ್ನ ತಪ್ಪನ್ನ ಒಪ್ಪಿಕೊಂಡು ಔಟ್ ನೀಡಿದರು. ಪರಿಣಾಮ ಕೆ.ಎಲ್ ರಾಹುಲ್ ಹೊಸ ತಂಡದ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕೌಟ್ ಆಗಿದ್ದಾರೆ.
ಮೂರನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್‌ರನ್ನ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಲಕ್ನೋಗೆ ಮತ್ತಷ್ಟು ಆಘಾತ ನೀಡಿದ್ದಾರೆ. 9 ಎಸೆತಗಳಲ್ಲಿ 7ರನ್‌ಗೆ ಶಮಿ ವಿಕೆಟ್ ಒಪ್ಪಿಸಿದ್ದಾರೆ.