ಏಷ್ಯಾ ಕಪ್ ಟಿ20 ಟೂರ್ನಿಯ ವೇಳೆ ಆಟದ ಖ್ಯಾತಿಗೆ ಚುತಿ ತಂದಿದ್ದಕ್ಕಾಗಿ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರೀಸ್ ರೌಫ್ ಅವರಿಗೆ ನಿಷೇಧದ ಬಿಸಿ ತಟ್ಟಿದೆ. ಅಲ್ಲದೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಜೇಬಿಗೂ ಕತ್ತರಿ ಬಿದ್ದಿದೆ. ಇವರಿಬ್ಬರೂ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರು ಎಂದು ಸಾಬೀತಾದ ಹಿನ್ನೆಲೆಯಲ್ಲಿ ಐಸಿಸಿ ಈ ಆಟಗಾರರ ಮೇಲೆ ದಂಡ ವಿಧಿಸಿದೆ. ಐಸಿಸಿ ಮಂಗಳವಾರ ಶಿಸ್ತು ಕ್ರಮವನ್ನು ಪ್ರಕಟಿಸಿದೆ.
ಪಾಕಿಸ್ತಾನ ತಂಡದ ಭರವಸೆಯ ಬೌಲರ್ ರೌಫ್ ಭಾರತ ವಿರುದ್ಧದ 2 ಪ್ರತ್ಯೇಕ ಪಂದ್ಯಗಳಲ್ಲಿ ನಿಯಮ ಉಲ್ಲಂಘಿಸಿದಕ್ಕಾಗಿ ಪಂದ್ಯದ ಶುಲ್ಕದ ಶೇಕಡಾ 30 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಮುಂದಿನ ಎರಡು ಪಂದ್ಯಗಳಿಂದ ಅವರನ್ನು ಅಮಾನತ್ತು ಮಾಡಲಾಗಿದೆ. ಇದರ ಪರಿಣಾಮ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರೌಫ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಅಲ್ಲದೆ ಎರಡನೇ ಪಂದ್ಯದಲ್ಲೂ ಇವರು ತಂಡದ ಪರ ಕಣಕ್ಕೆ ಇಳಿಯುವುದಿಲ್ಲ. ಪಂದ್ಯ ಶುಲ್ಕದ 30 ಪ್ರತಿಶತ ದಂಡ ಮತ್ತು ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.

ಹ್ಯಾರಿಸ್ ರೌಫ್ ಕಳೆದ 24 ತಿಂಗಳಲ್ಲಿ ಒಟ್ಟು 4 ಡಿಮೆರಿಟ್ ಪಾಯಿಂಟ್ ಹೊಂದಿದ್ದಾರೆ. ಐಸಿಸಿ ನಿಯಮದಂತೆ 4 ಅಥವಾ ಅದಕ್ಕಿಂತ ಹೆಚ್ಚು ಪಾಯಿಂಟ್‌ಗಳನ್ನು ಪಡೆದರೆ, ಈ ಪಾಯಿಂಟ್‌ಗಳನ್ನು ಅಮಾನತು ಪಾಯಿಂಟ್‌ಗಳಾಗಿ ಪರಿವರ್ತಿಸಲಾಗುತ್ತದೆ. ಇದರ ಪರಿಣಾಮವಾಗಿ ಪಂದ್ಯ ಅಮಾನತು ಮಾಡಲಾಗುತ್ತದೆ. ಎರಡು ಅಮಾನತು ಪಾಯಿಂಟ್‌ಗಳನ್ನು ಪಡೆದರೆ ಒಂದು ಟೆಸ್ಟ್ ಪಂದ್ಯ, ಎರಡು ಏಕದಿನ ಅಥವಾ ಟಿ20 ಪಂದ್ಯಗಳಿಗೆ ಅಮಾನತು ಮಾಡಲಾಗುತ್ತದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಲೀಗ್, ಸೂಪರ್ 4, ಫೈನಲ್ ಸೇರಿದಂತೆ ಒಟ್ಟು ಮೂರು ಬಾರಿ ಮುಖಾಮುಖಿ ಆದವು. ಈ ವೇಳೆ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯಗಳ ನಿಯಮ ಉಲ್ಲಂಘಿಸಿದಕ್ಕಾಗಿ ಮ್ಯಾಚ್ ರೆಫ್ರಿಯ ಮುಂದೆ ಇವರು ವಿಚಾರಣೆಗೆ ಹಾಜರಾದರು. ಈ ವೇಳೆ ಸೂರ್ಯ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.21 ಅನ್ನು ಉಲ್ಲಂಘಿಸಿದ್ದಾರೆ. ಇದು ಆಟಕ್ಕೆ ಅಪಖ್ಯಾತಿ ತರುವ ನಡವಳಿಕೆಗೆ ಸಂಬಂಧಿಸಿದ್ದಾಗಿದ್ದು, ಅವರಿಗೆ ಪಂದ್ಯ ಶುಲ್ಕದ 30 ಪ್ರತಿಶತ ದಂಡ ಮತ್ತು ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಇನ್ನು ಪಾಕ್ ಆಟಗಾರ ಸಾಹಿಬ್ಜಾದಾ ಫರ್ಹಾನ್ ಅವರಿಗೂ ಶಿಕ್ಷೆಯನ್ನು ವಿಧಿಸಲಾಗಿದ್ದು, ಇವರಿಗೆ ಒಂದು ಡಿಮೇರಿಟ್ ಅಂಕವನ್ನು ನಿಡಲಾಗಿದೆ.
ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮಾ ಆರ್ಟಿಕಲ್ 2.21 ರ ಅಡಿಯಲ್ಲಿ ತಪ್ಪು ಎಸಗಿದ್ದು, ಇದನ್ನು ಅವರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇವರಿಗೆ 1 ಡಿಮೆರಿಟ್ ಅಂಕವನ್ನು ನೀಡಲಾಗಿದೆ.