ಭಾರತ vs ವಿಂಡೀಸ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್, ಸೋನಿ ಚಾನೆಲ್‌ಗಳಲ್ಲಿ ಪ್ರಸಾರವಾಗದಿರಲು ಇದೇ ಕಾರಣ

ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಜಯ ಗಳಿಸಿದ್ದ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದ್ದು, ಮೊದಲಿಗೆ ಇತ್ತಂಡಗಳ ನಡುವಿನ ಏಕದಿನ ಸರಣಿ ಆರಂಭಗೊಂಡಿದೆ.
ಏಕದಿನ ಸರಣಿಗೆ ಟೀಮ್ ಇಂಡಿಯಾ ಪೂರ್ಣಾವಧಿ ನಾಯಕ ರೋಹಿತ್ ಶರ್ಮ ಹಾಗೂ ಇತರೆ ಪ್ರಮುಖ ಆಟಗಾರರು ವಿಶ್ರಾಂತಿಯ ಕಾರಣದಿಂದಾಗಿ ಅಲಭ್ಯರಾಗಿದ್ದು, ಅನೇಕ ಯುವ ಆಟಗಾರರನ್ನೊಳಗೊಂಡ ತಂಡವನ್ನು ಶಿಖರ್ ಧವನ್ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಇತ್ತಂಡಗಳ ನಡುವಿನ ಏಕದಿನ ಸರಣಿಯ ಪ್ರಥಮ ಪಂದ್ಯ ಕೂಡ ಈಗಾಗಲೇ ಮುಗಿದಿದ್ದು, ಟೀಮ್ ಇಂಡಿಯಾ ಈ ಪಂದ್ಯದಲ್ಲಿ 3 ರನ್‌ಗಳ ರೋಚಕ ಜಯವನ್ನು ಸಾಧಿಸಿದೆ.
ಪಂದ್ಯದ ಕೊನೆಯ ಎಸೆತದವರೆಗೂ ಭಾರೀ ಕುತೂಹಲವನ್ನು ಉಂಟು ಮಾಡಿದ್ದ ಈ ಪಂದ್ಯದ ನೇರಪ್ರಸಾರ ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಮಾತ್ರ ಲಭ್ಯವಿತ್ತು. ಟೀಮ್ ಇಂಡಿಯಾದ ಈ ಹಿಂದಿನ ಸರಣಿಗಳ ರೀತಿ ಈ ಸರಣಿಯ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್ ಆಗಲಿ ಅಥವಾ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಆಗಲಿ ನೇರ ಪ್ರಸಾರ ಮಾಡಲಿಲ್ಲ. ಇದು ಕೆಲ ಅಭಿಮಾನಿಗಳಿಗೆ ನಿರಾಸೆಯನ್ನುಂಟುಮಾಡಿತು ಹಾಗೂ ಮತ್ತಷ್ಟು ಅಭಿಮಾನಿಗಳಿಗೆ ಈ ಪಂದ್ಯಗಳನ್ನು ಸೋನಿ ಮತ್ತು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳು ಪ್ರಸಾರ ಮಾಡದೇ ಇರಲು ಅಸಲಿ ಕಾರಣವೇನೆಂಬ ಪ್ರಶ್ನೆಯನ್ನು ಮೂಡಿಸಿತು. ಹೀಗೆ ಅಭಿಮಾನಿಗಳಲ್ಲಿ ಉಂಟಾಗಿರುವ ಈ ಪ್ರಶ್ನೆಗೆ ಉತ್ತರ ಮುಂದೆ ಇದೆ ಓದಿ.

ಖಾಸಗಿ ಚಾನೆಲ್‌ಗಳಲ್ಲಿ ಪಂದ್ಯ ಪ್ರಸಾರವಾಗದೇ ಇರಲು ಇದೇ ಕಾರಣ
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಸರಣಿಗಳ ಪಂದ್ಯಗಳು ಸೋನಿ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗದೇ ಇರಲು ಕಾರಣ ಈ ಸಂಸ್ಥೆಗಳು ನೇರ ಪ್ರಸಾರದ ಹಕ್ಕನ್ನು ಖರೀದಿಸದೇ ಇರುವುದು. ವಿಶ್ವದ ಶ್ರೀಮಂತ ಕ್ರಿಕೆಟ್ ತಂಡ ಎಂಬ ಖ್ಯಾತಿಯನ್ನು ಪಡೆದಿರುವ ಭಾರತ ತಂಡದ ಈ ಸರಣಿಯ ನೇರ ಪ್ರಸಾರದ ಹಕ್ಕನ್ನು ಈ ಸಂಸ್ಥೆಗಳು ಖರೀದಿಸದೇ ಇರಲು ಕಾರಣ ಇದರಿಂದ ಹೆಚ್ಚಿನ ಆದಾಯ ಬರುವುದಿಲ್ಲ ಎಂಬುದು.

ರಾತ್ರಿ ಸಮಯದ ಪಂದ್ಯ ಹಾಗೂ ಪ್ರಾಯೋಜಕರ ಕೊರತೆ
ವೆಸ್ಟ್ ಇಂಡೀಸ್‌ನಲ್ಲಿ ಪಂದ್ಯಗಳು ದಿನದ ಸಮಯದಲ್ಲಿ ನಡೆಯುವಾಗ ಭಾರತದಲ್ಲಿ ಸಮಯ ರಾತ್ರಿಯಾಗಿರುತ್ತದೆ. ನೇರಪ್ರಸಾರ ರಾತ್ರಿಯ ವೇಳೆ ನಡೆಯುವುದರಿಂದ ಆ ಸಮಯದಲ್ಲಿ ಹೆಚ್ಚಿನ ವೀಕ್ಷಕರು ಇರುವುದಿಲ್ಲ ಹೀಗಾಗಿ ಪ್ರಾಯೋಜಕರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರುವುದಿಲ್ಲ ಹಾಗೂ ಹಕ್ಕನ್ನು ಖರೀದಿಸಿದರೆ ನಿರೀಕ್ಷಿಸಿದ ಆದಾಯ ಬರುವುದಿಲ್ಲ ಎಂಬ ಕಾರಣಕ್ಕೆ ಖಾಸಗಿ ಚಾನೆಲ್ ಸಂಸ್ಥೆಗಳು ಈ ಸರಣಿಯ ಹಕ್ಕನ್ನು ಖರೀದಿಸಲು ಮುಂದಾಗಿಲ್ಲ. ಅಷ್ಟೇ ಅಲ್ಲದೆ ವೆಸ್ಟ್ ಇಂಡೀಸ್ ಈ ಹಿಂದಿನ ರೀತಿ ಬಲಿಷ್ಠ ತಂಡವಾಗಿ ಉಳಿದುಕೊಂಡಿರದೇ ಇರುವುದು ಕೂಡ ಖಾಸಗಿ ಚಾನೆಲ್ ಸಂಸ್ಥೆಗಳು ಈ ಸರಣಿಯ ನೇರಪ್ರಸಾರದ ಹಕ್ಕನ್ನು ಖರೀದಿಸದೇ ಇರಲು ಮತ್ತೊಂದು ಕಾರಣ ಎಂದು ಹೇಳಬಹುದು.

ಭಾರತದಲ್ಲಿ ಪಂದ್ಯ ವೀಕ್ಷಿಸಲು ಇವೆ 2 ಮಾರ್ಗಗಳು
ಇನ್ನು ಖಾಸಗಿ ಚಾನೆಲ್‌ಗಳಾದ ಸೋನಿ ಮತ್ತು ಸ್ಟಾರ್ ಸ್ಪೋರ್ಟ್ಸ್ ಈ ಪಂದ್ಯಗಳನ್ನು ಪ್ರಸಾರ ಮಾಡದೇ ಇರುವ ಕಾರಣ ಈ ಪಂದ್ಯಗಳು ಹಾಟ್ ಸ್ಟಾರ್ ಮತ್ತು ಸೋನಿ ಲಿವ್ ಮೊಬೈಲ್ ಅಪ್ಲಿಕೇಶನ್‌ಗಳಲ್ಲೂ ಲಭ್ಯವಿಲ್ಲ. ಆದರೆ ಭಾರತದಲ್ಲಿ ಡಿಡಿ ಸ್ಪೋರ್ಟ್ಸ್ ಚಾನೆಲ್ ಮತ್ತು ಫ್ಯಾನ್ ಕೋಡ್ ಅಪ್ಲಿಕೇಶನ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಫ್ಯಾನ್ ಕೋಡ್ ಅಪ್ಲಿಕೇಶನ್‌ನಲ್ಲಿ ಚಂದಾದಾರರಾದ ನಂತರ ಪಂದ್ಯ ವೀಕ್ಷಿಸಬಹುದಾಗಿದೆ. ಇನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಭಾರತ ಮತ್ತು ವಿಂಡೀಸ್ ನಡುವಿನ ಪ್ರಥಮ ಏಕದಿನ ಪಂದ್ಯವನ್ನು ವೀಕ್ಷಿಸಿದ ಹಲವಾರು ಕ್ರಿಕೆಟ್ ಪ್ರೇಮಿಗಳು 1990ರ ಟೀಮ್ ಇಂಡಿಯಾದ ಪಂದ್ಯಗಳನ್ನು ವೀಕ್ಷಿಸುತ್ತಿದ್ದ ಅನುಭವವಾಗುತ್ತಿದೆ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು, ಈ ಸರಣಿಯನ್ನು ಪ್ರಸಾರ ಮಾಡುತ್ತಿರುವ ದೂರದರ್ಶನ ಸಂಸ್ಥೆ 90ರ ಭಾರತ ತಂಡದ ಪಂದ್ಯಗಳನ್ನು ಕೂಡ ನೇರ ಪ್ರಸಾರ ಮಾಡುತ್ತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications