World Cup 2023: 'ಪಂದ್ಯಶ್ರೇಷ್ಠ ಪ್ರಶಸ್ತಿ'ಯನ್ನು ಇವರಿಗೆ ಅರ್ಪಿಸಿ ಪಾಕ್‌ಗೆ ಮೈದಾನದಲ್ಲೇ ಡಿಚ್ಚಿ ಕೊಟ್ಟ ಇಬ್ರಾಹಿಂ ಝದ್ರಾನ್
ಸೋಮವಾರ, ಅಕ್ಟೋಬರ್ 23ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ನೆರೆಯ ಪಾಕಿಸ್ತಾನ ತಂಡದ ವಿರುದ್ಧ ಅಫ್ಘಾನಿಸ್ತಾನ ಐತಿಹಾಸಿಕ ಚೊಚ್ಚಲ ಏಕದಿನ ಗೆಲುವು ಸಾಧಿಸಿತು.
283 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 49 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಇದೇ ವೇಳೆ ಬಾಬರ್ ಅಜಂ ಪಡೆ ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಮೂರು ಸೋಲು ಕಂಡು ಮುಖಭಂಗ ಅನುಭವಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನ ವಿರುದ್ಧ ಹಲವು ಥ್ರಿಲ್ಲರ್ ಪಂದ್ಯಗಳಲ್ಲಿ ಸ್ಪರ್ಧಿಸಿದ ನಂತರ, ಅಫ್ಘಾನಿಸ್ತಾನವು ಕೊನೆಗೂ ತಮ್ಮ ಸಾಂಪ್ರದಾಯಿಕ ಏಷ್ಯನ್ ಎದುರಾಳಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.
283 ರನ್‌ಗಳ ಗುರಿ ಬೆನ್ನಟ್ಟಲು ಅಫ್ಘಾನಿಸ್ತಾನ ತಂಡಕ್ಕೆ ನೆರವಾದ ಆರಂಭಿಕ ಬ್ಯಾಟರ್ ಇಬ್ರಾಹಿಂ ಝದ್ರಾನ್ 113 ಎಸೆತಗಳಲ್ಲಿ 10 ಬೌಂಡರಿಗಳ ಸಮೇತ 87 ರನ್‌ಗಳ ಅಮೋಘ ಅರ್ಧಶತಕ ಬಾರಿಸಿದರು.
ಪಂದ್ಯ ವಿಜೇತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ 21ರ ಹರೆಯದ ಇಬ್ರಾಹಿಂ ಝದ್ರಾನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಪಂದ್ಯದ ನಂತರದ ಸಂದರ್ಶನದಲ್ಲಿ ಮಾತನಾಡಿದ ಆರಂಭಿಕ ಬ್ಯಾಟರ್ ಇಬ್ರಾಹಿಂ ಝದ್ರಾನ್, ತಮ್ಮ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಾಕಿಸ್ತಾನದಿಂದ ಬಲವಂತವಾಗಿ ಕಳುಹಿಸಲಾದ ಅಫ್ಘಾನ್ ನಿರಾಶ್ರಿತರಿಗೆ ಅರ್ಪಿಸಿದರು. ಮೈದಾನದಲ್ಲೇ ನೆರೆಹೊರೆಯವರಿಗೆ ಪರೋಕ್ಷವಾಗಿ ಡಿಚ್ಚಿ ನೀಡಿದರು.
"ನಾನು ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಬಲವಂತವಾಗಿ ಹಿಂತಿರುಗಿದ ಜನರಿಗೆ ಅರ್ಪಿಸಲು ಬಯಸುತ್ತೇನೆ," ಎಂದು ಇಬ್ರಾಹಿಂ ಝದ್ರಾನ್ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹೇಳಿದರು.
ಅಫ್ಘಾನಿಸ್ತಾನ ತಂಡಕ್ಕೆ ಐತಿಹಾಸಿಕ ವಿಜಯ
283 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ ಮತ್ತು ರಹಮತ್ ಶಾ ಅವರ ಅಮೋಘ ಅರ್ಧಶತಕಗಳ ನೆರವಿನಿಂದ 49 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್‌ಗಳ ಅಂತರದಿಂದ ಗೆಲುವಿನ ದಡ ತಲುಪಿತು.
ಸವಾಲಿನ ಮೊತ್ತದ ಚೇಸಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡ ಯಾವುದೇ ಹಂತದಲ್ಲೂ ಪಾಕಿಸ್ತಾನ ತಂಡಕ್ಕೆ ಶರಣಾಗಲಿಲ್ಲ. ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪಾಕಿಸ್ತಾನಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ಅಫ್ಘಾನಿಸ್ತಾನ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ ಮೊದಲ ವಿಕೆಟ್‌ಗೆ 130 ರನ್‌ಗಳ ಜೊತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ರಹಮಾನುಲ್ಲಾ ಗುರ್ಬಾಜ್ 53 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 65 ರನ್ ಗಳಿಸಿ ಔಟಾದರು.
ನಂತರ ಬಂದ ರಹಮತ್ ಶಾ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ ಮುರಿಯದ ಮೂರನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವು ತಂದಿತ್ತರು. ರಹಮತ್ ಶಾ ಕೂಡ ಪರಿಸ್ಥಿತಿ ತಕ್ಕಂತೆ ಬ್ಯಾಟಿಂಗ್ ಮಾಡಿ 84 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ ಅಜೇಯ 77 ರನ್ ಬಾರಿಸಿದರೆ, ನಾಯಕ ಹಶ್ಮತುಲ್ಲಾ ಶಾಹಿದಿ 45 ಎಸೆತಗಳಲ್ಲಿ 4 ಬೌಂಡರಿ ಮೂಲಕ ಅಜೇಯ 48 ರನ್ ಗಳಿಸಿದರು.
ಪಾಕಿಸ್ತಾನ ಪರ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಮತ್ತು ಹಸನ್ ಅಲಿ ಮಾತ್ರ ತಲಾ ಒಂದೊಂದು ವಿಕೆಟ್ ಪಡೆದರೆ, ಉಳಿದೆಲ್ಲಾ ಬೌಲರ್‌ಗಳ ದುಬಾರಿಯಾಗುವುದರ ಜೊತೆಗೆ ವಿಕೆಟ್ ರಹಿತರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications