ಕ್ರಿಕೆಟ್ ಸರಣಿ ರದ್ದು: ಬಿಸಿಸಿಐ ವಿರುದ್ಧ ದೂರು ನೀಡಿದ್ದ ಪಾಕಿಸ್ತಾನಕ್ಕೆ ಮುಖಭಂಗ

ದುಬೈ, ನವೆಂಬರ್ 20: ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಳ್ಳುವುದಾಗಿ ಸಹಿ ಹಾಕಿ, ಬಳಿಕ ಅವುಗಳನ್ನು ರದ್ದುಗೊಳಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ನಷ್ಟ ಭರಿಸಲು ದಂಡ ವಿಧಿಸುವಂತೆ ಕೋರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ತಿರಸ್ಕರಿಸಿದೆ.
ಪಾಕಿಸ್ತಾನದ ದೂರನ್ನು ಕೈಗೆತ್ತಿಕೊಂಡ ಐಸಿಸಿಯ ವಿವಾದ ಸಮಿತಿ, ಅಕ್ಟೋಬರ್ 1ರಿಂದ 3ರವರೆಗೂ ಉಭಯ ಸಂಸ್ಥೆಗಳ ಮೌಖಿಕ ಹಾಗೂ ಲಿಖಿತ ಹೇಳಿಕೆಗಳನ್ನು ಪರಿಶೀಲಿಸಿತು.
ಬ್ರಿಟಿಷ್ ಬ್ಯಾರಿಸ್ಟರ್ ಮೈಖಲ್ ಬೆಲೊಫ್, ಜಾನ್ ಪೌಲ್ಸನ್ ಮತ್ತು ಅನಬೆಲ್ಲೆ ಬೆನ್ನೆಟ್ ಅವರನ್ನು ಒಳಗೊಂಡ ಸಮಿತಿ ಪಾಕಿಸ್ತಾನದ ಬೇಡಿಕೆಯನ್ನು ತಳ್ಳಿ ಹಾಕಿತು.
2015-2023ರ ಎಂಟು ವರ್ಷಗಳ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಎಂಟು ದ್ವಿಪಕ್ಷೀಯ ಸರಣಿಗಳನ್ನು ಆಡುವುದಾಗಿ 2014ರಲ್ಲಿ ಬಿಸಿಸಿಐ ಮತ್ತು ಪಿಸಿಬಿ ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದವು.
ಆದರೆ, ಈ ಒಪ್ಪಂದವನ್ನು ಮುರಿದುಕೊಳ್ಳುವ ಮೂಲಕ ಬಿಸಿಸಿಐ ಅಗೌರವ ತೋರಿದೆ. ಇದರಿಂದ ಆಗಿರುವ ನಷ್ಟಕ್ಕೆ 70 ಮಿಲಿಯನ್ ಡಾಲರ್ ನೀಡಬೇಕು ಎಂದು ಪಿಸಿಬಿ ದೂರು ನೀಡಿತ್ತು.
ದೂರು ಪಡೆದುಕೊಂಡಿದ್ದ ಐಸಿಸಿ, ವಿವಾದ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಅದನ್ನು ಪ್ರಶ್ನಿಸಲು ಆಗುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿತ್ತು.
ಉಭಯ ದೇಶಗಳ ನಡುವೆ ಉಂಟಾಗಿದ್ದ ಉದ್ವಿಗ್ನತೆ ಹಾಗೂ ಎಂಒಯುಗೆ ಸಹಿ ಹಾಕಿದ್ದರೂ ಸರ್ಕಾರದ ಅನುಮೋದನೆ ದೊರಕದ ಕಾರಣ ಯಾವುದೇ ದ್ವಿಪಕ್ಷೀಯ ಸರಣಿ ನಡೆಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications