Women's T20 World Cup: ವಿಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಮತ್ತೆ ಮಿಂಚಿದ ಆರ್‌ಸಿಬಿ ಆಟಗಾರ್ತಿ

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಎರಡನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಸರ್ವಾಂಗೀಣ ಪ್ರದರ್ಶನ ನೀಡಿದ್ದು ಸುಲಭ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಬೌಲಿಂಗ್ ವಿಭಾಗದಲ್ಲಿ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತು ಮಿಂಚಿದರೆ ಬ್ಯಾಟಿಂಗ್‌ನಲ್ಲಿ ರಿಚಾ ಘೋಷ್ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಭಾರತದ ಶಿಸ್ತಿನ ಬೌಲಿಂಗ್ ದಾಳಿಯ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡಲು ವಿಂಡೀಸ್ ತಂಡ ವಿಫಲವಾಯಿತು. ಭಾರತದ ಬೌಲರ್‌ಗಳು ವಿಕೇಟ್ ಪಡೆಯುವುದರ ಜೊತೆಗೆ ರನ್ ನಿಯಂತ್ರಣದಲ್ಲಿಯೂ ಅದ್ಭುತ ಯಶಸ್ಸು ಸಾಧಿಸಿದರು. ಹೀಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 118 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು.

3 ವಿಕೆಟ್ ಕಿತ್ತು ವಿಂಡೀಸ್‌ಗೆ ಆಘಾತ ನೀಡಿದ ದೀಪ್ತಿ
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ ನೀಡಿದ್ದು ದೀಪ್ತಿ ಶರ್ಮಾ. 4 ಓವರ್‌ಗಳಲ್ಲಿ 15 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರೇಣುಕಾ ಸಿಂಗ್ ಠಾಕೂರ್ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ತಂಡದ ಪರ ಬ್ಯಾಟಿಂಗ್‌ನಲ್ಲಿ ಸ್ಟೆಫಾನಿ ಟೇಲರ್ (42 ರನ್), ಶೆಮೈನ್ ಕ್ಯಾಂಪ್‌ಬೆಲ್ಲೆ (30 ರನ್), ಚೆಡಿಯನ್ ನೇಷನ್ (21 ರನ್) ಮತ್ತು ಶಬಿಕಾ ಗಜ್ನಾಬಿ (15 ರನ್) ಗಳಿಸಿದ್ದು ಬಿಟ್ಟರೆ ಉಳಿದರಾರು ಎರಡಂಕಿ ಮೊತ್ತ ಗಳಿಸಲಿಲ್ಲ.

ಮತ್ತೆ ಮಿಂಚಿದ ರಿಚಾ ಘೋಷ್
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 10 ರನ್‌ಗಳನ್ನು ಮಾತ್ರವೇ ಗಳಿಸಲು ಯಶಸ್ವಿಯಾದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಂಧಾನ ಗಾಯದ ಕಾರಣ ಆಡುವ ಬಳಗದಿಂದ ಹೊರಗುಳಿದಿದ್ದರು. ಶಫಾಲಿ ವರ್ಮಾ 23 ಎಸೆತಗಳಲ್ಲಿ 28 ರನ್‌ಗಳಿಸಿದರೆ ಜಮಿಮಾ ರೋಡ್ರಿಗಸ್ ಕೇವಲ 1 ರನ್ ಮಾತ್ರವೇ ಗಳಿಸಲು ಶಕ್ತರಾದರು. ಶಫಾಲಿ ವರ್ಮ ವಿಕೆಟ್ ಕಳೆದುಕೊಂಡ ಬಳಿಕ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ರಿಚಾ ಘೋಷ್ ಇನ್ನಿಂಗ್ಸ್ ಬೆಳೆಸುತ್ತಾ ಸಾಗಿದರು. ಗೆಲುವಿನ ಹೊಸ್ತಿಲಲ್ಲಿ ಕೌರ್ 33 ರನ್‌ಗಳಿಸಿ ವಿಕೆಟ್ ಕಳೆದುಕೊಂಡರಾದರೂ ರಿಚಾ ಘೋಷ್ ಮತ್ತೊಮ್ಮೆ ಕೊನೆಯ ತನಕ ನಿಂತು ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರು. 32 ಎಸೆತಗಳಲ್ಲಿ 44 ರನ್‌ಗಳಿಸಿದ ರಿಚಾ ಈ ಪಂದ್ಯದಲ್ಲಿ ಮಿಂಚಿದ್ದಾರೆ. ಕಳೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿಯೂ ರಿಚಾ ಘೋಷ್ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇತ್ತೀಚೆಗಷ್ಟೇ ನಡೆದ ಹರಾಜಿನಲ್ಲಿ ರಿಚಾ ಆರ್‌ಸಿಬಿ ತಂಡದ ಪಾಲಾಗಿದ್ದಾರೆ ಎಂಬುದು ಗಮನಾರ್ಹ.

ಭಾರತ vs ವೆಸ್ಟ್ ಇಂಡೀಸ್ ಆಡುವ 11ರ ಬಳಗ
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ದೇವಿಕಾ ವೈದ್ಯ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್ ಠಾಕೂರ್.
ವೆಸ್ಟ್ ಇಂಡೀಸ್: ಹೇಲಿ ಮ್ಯಾಥ್ಯೂಸ್ (ನಾಯಕಿ), ಸ್ಟೆಫಾನಿ ಟೇಲರ್, ಶೆಮೈನ್ ಕ್ಯಾಂಪ್‌ಬೆಲ್ಲೆ, ಶಬಿಕಾ ಗಜ್ನಾಬಿ, ಚಿನೆಲ್ಲೆ ಹೆನ್ರಿ, ಚೆಡಿಯನ್ ನೇಷನ್, ಅಫಿ ಫ್ಲೆಚರ್, ಶಾಮಿಲಿಯಾ ಕಾನ್ನೆಲ್, ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್), ಕರಿಷ್ಮಾ ರಾಮ್ಹರಾಕ್, ಷೇಕೆರಾ ಸೆಲ್ಮನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications