
ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2022ರ 14ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳನ್ನೇ ಮಣಿಸಿದ್ದ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ವನಿತೆಯರು ಸುಲಭ ಗೆಲುವು ಸಾಧಿಸಿದ್ದಾರೆ.
ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡವನ್ನ ಮಣಿಸಿ ಉತ್ತಮ ಆರಂಭದ ಹೆಜ್ಜೆಯಿಟ್ಟಿದ ವೆಸ್ಟ್ ಇಂಡೀಸ್, ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ನಾಟಕೀಯ ಕುಸಿತ ಕಂಡು ಸೋಲನ್ನ ಅನುಭವಿಸಿತ್ತು. ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡವು ಮತ್ತೊಮ್ಮೆ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಮೊದಲು ಮೂವರು ಬ್ಯಾಟರ್‌ಗಳು ತಂಡದ ಮೊತ್ತ 34 ರನ್‌ಗಳೊಳಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ನಾಯಕಿ ಸ್ಟಫಾನಿ ಟೇಲರ್ 91 ಎಸೆತಗಳಲ್ಲಿ 50 ರನ್ ರನ್‌ಗಳಿಸಿ ತಂಡದ ಮರ್ಯಾದೆ ಉಳಿಸಿದರು. ಶೆಮೈನ್ ಕ್ಯಾಂಪ್ಬೆಲ್ಲೆ 20 ರನ್‌ಗಳ ಕೊಡುಗೆ ಬಿಟ್ಟರೆ ಬೇರೆ ಯಾವೊಬ್ಬ ಆಟಗಾರ್ತಿಯು ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಪರಿಣಾಮ ವೆಸ್ಟ್ ಇಂಡೀಸ್ ವನಿತೆಯರು 45.5 ಓವರ್‌ಗಳಲ್ಲಿ 131ರನ್‌ಗಳಿಗೆ ಆಲೌಟ್ ಆದರು.
ಆಸ್ಟ್ರೇಲಿಯಾ ಪರ ಎಲ್ಲಿಸ್ ಪೆರ್ರಿ 3, ಆ್ಯಶ್ಲಿ ಗಾರ್ಡ್‌ನರ್ 3, ಜೆಸ್ ಜೊನಾಸೆನ್ 2, ಮೇಘನ್ ಸ್ಕಟ್ 1 ವಿಕೆಟ್ ಪಡೆದು ಮಿಂಚಿದರು.
132 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಸಹ ಆರಂಭಿಕ ಆಘಾತ ಎದುರಿಸಿತು. ಅಲಿಸಾ ಹೀಲಿ 3, ನಾಯಕಿ ಮೆಗ್ ಲ್ಯಾನಿಂಗ್ 0, ಎಲ್ಲಿಸ್ ಪೆರ್ರಿ 10ರನ್‌ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ತನ್ನ ಉತ್ತಮ ಫಾರ್ಮ್ ಮುಂದುವರಿಸಿದ ರೇಚಲ್ ಹೇನ್ಸ್ ಅಜೇಯ 83 ರನ್ ಹಾಗೂ ಬೆತ್ ಮೂನಿ ಅಜೇಯ 28 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 30.2 ಓವರ್‌ಗಳಲ್ಲಿ 7 ವಿಕೆಟ್‌ಗಳ ಗೆಲುವನ್ನ ಸಾಧಿಸಿದೆ.