World Cup 2023: ನೆರೆಯ ಪಾಕಿಸ್ತಾನಕ್ಕೆ ಹೊರೆಯಾದ ಅಫ್ಘಾನಿಸ್ತಾನ; ಬಾಬರ್ ಅಜಂ ಪಡೆಗೆ ಹ್ಯಾಟ್ರಿಕ್ ಮುಖಭಂಗ
ಸೋಮವಾರ, ಅಕ್ಟೋಬರ್ 23ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಅಫ್ಘಾನಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿದರೆ, ಬಾಬರ್ ಅಜಂ ಪಡೆ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡು ಮುಖಭಂಗ ಅನುಭವಿಸಿತು.
ಇದೇ ವೇಳೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೆರೆಯ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ ಚೊಚ್ಚಲ ಗೆಲುವು ಸಾಧಿಸಿದರೆ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ತನ್ನ ಎರಡನೇ ಗೆಲುವು ಪಡೆಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ ಬಾಬರ್ ಅಜಂ ಮತ್ತು ಅಬ್ದುಲ್ಲಾ ಶಫೀಕ್ ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 282 ರನ್ ಕಲೆಹಾಕಿತು.
283 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ ಮತ್ತು ರಹಮತ್ ಶಾ ಅವರ ಅಮೋಘ ಅರ್ಧಶತಕಗಳ ನೆರವಿನಿಂದ 49 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್‌ಗಳ ಅಂತರದಿಂದ ಗೆಲುವಿನ ದಡ ತಲುಪಿತು.
ಸವಾಲಿನ ಮೊತ್ತದ ಚೇಸಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡ ಯಾವುದೇ ಹಂತದಲ್ಲೂ ಪಾಕಿಸ್ತಾನ ತಂಡಕ್ಕೆ ಶರಣಾಗಲಿಲ್ಲ. ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪಾಕಿಸ್ತಾನಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಅಫ್ಘಾನಿಸ್ತಾನ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ ಮೊದಲ ವಿಕೆಟ್‌ಗೆ 130 ರನ್‌ಗಳ ಜೊತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ರಹಮಾನುಲ್ಲಾ ಗುರ್ಬಾಜ್ 53 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 65 ರನ್ ಗಳಿಸಿ ಔಟಾದರು.
ಮತ್ತೊಬ್ಬ ಆರಂಭಿಕ ಇಬ್ರಾಹಿಂ ಝದ್ರಾನ್ 113 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 87 ರನ್ ಬಾರಿಸಿ ಗೆಲುವಿಗೆ ಮುನ್ನುಡಿ ಬರೆದು ವಿಕೆಟ್ ಒಪ್ಪಿಸಿದರು.
ನಂತರ ಬಂದ ರಹಮತ್ ಶಾ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ ಮುರಿಯದ ಮೂರನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವು ತಂದಿತ್ತರು.
ರಹಮತ್ ಶಾ ಕೂಡ ಪರಿಸ್ಥಿತಿ ತಕ್ಕಂತೆ ಬ್ಯಾಟಿಂಗ್ ಮಾಡಿ 84 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ ಅಜೇಯ 77 ರನ್ ಬಾರಿಸಿದರೆ, ನಾಯಕ ಹಶ್ಮತುಲ್ಲಾ ಶಾಹಿದಿ 45 ಎಸೆತಗಳಲ್ಲಿ 4 ಬೌಂಡರಿ ಮೂಲಕ ಅಜೇಯ 48 ರನ್ ಗಳಿಸಿದರು.

ಪಾಕಿಸ್ತಾನ ಪರ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಮತ್ತು ಹಸನ್ ಅಲಿ ಮಾತ್ರ ತಲಾ ಒಂದೊಂದು ವಿಕೆಟ್ ಪಡೆದರೆ, ಉಳಿದೆಲ್ಲಾ ಬೌಲರ್‌ಗಳ ದುಬಾರಿಯಾಗುವುದರ ಜೊತೆಗೆ ವಿಕೆಟ್ ರಹಿತರಾದರು.
ಇದಕ್ಕೂ ಮುನ್ನ ಪಾಕಿಸ್ತಾನದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಜೋಡಿ ಮೊದಲ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿತು. 22 ಎಸೆತಗಳಲ್ಲಿ 17 ರನ್ ಗಳಿಸಿ ಆಡುತ್ತಿದ್ದ ಇಮಾಮ್-ಉಲ್-ಹಕ್ ಅಜ್ಮತುಲ್ಲಾ ಒಮರ್ಜಾಯ್ ಬೌಲಿಂಗ್‌ನಲ್ಲಿ ಔಟಾದರು.
ನಂತರ ಬಂದ ನಾಯಕ ಬಾಬರ್ ಅಜಂ ಅಫ್ಘಾನಿಸ್ತಾನ ಬೌಲರ್‌ಗಳನ್ನು ಕಾಡಿದರು. ಈ ವೇಳೆ 75 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 58 ರನ್ ಬಾರಿಸಿದ್ದ ಅಬ್ದುಲ್ಲಾ ಶಫೀಕ್ ಔಟಾದರು. ಆ ಬಳಿಕ ಮೊಹಮ್ಮದ್ ರಿಜ್ವಾನ್ ಕೇವಲ 8 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಬಾಬರ್ ಅಜಂ 92 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 74 ರನ್ ಗಳಿಸಿದರೆ ಔಟಾದರೆ, ಸೌದ್ ಶಕೀಲ್ 34 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 25 ರನ್ ಗಳಿಸಿದರು.

ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಾದಾಬ್ ಖಾನ್ ಮತ್ತು ಇಫ್ತಿಕರ್ ಅಹ್ಮದ್ 6ನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ನೀಡಿದರು. ಇಫ್ತಿಕರ್ ಅಹ್ಮದ್ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 40 ರನ್ ಬಾರಿಸಿದರೆ, ಶಾದಾಬ್ ಖಾನ್ 38 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 40 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ವಿಶ್ವಕಪ್ ಮೊದಲ ಪಂದ್ಯವಾಡಿದ ನೂರ್ ಅಹ್ಮದ್ 10 ಓವರ್‌ಗಳಲ್ಲಿ 49 ರನ್ ನೀಡಿ 3 ವಿಕೆಟ್ ಪಡೆದರೆ, ನವೀನ್-ಉಲ್-ಹಕ್ 7 ಓವರ್‌ಗಳಲ್ಲಿ 52 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಮೊಹಮ್ಮದ್ ನಬಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications