ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಭಾರತ ತಂಡ ವಿಶ್ವಕಪ್‌ನಲ್ಲಿ ತನ್ನ ಅಜೇಯ ದಾಖಲೆಯನ್ನು ಮುಂದುವರೆಸಿದೆ.
1992ರಿಂದ 2023ರವರೆಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ 8 ಬಾರಿ ಮುಖಾಮುಖಿಯಾಗಿದ್ದು, ಪ್ರತಿ ಬಾರಿಯೂ ಭಾರತ ಗೆಲುವು ಸಾಧಿಸಿದೆ.

1.20 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಎದುರು ನಡೆದ ಬಹು ನಿರೀಕ್ಷಿತ 2023ರ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್ ಆಯಿತು.
192 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ರೋಹಿತ್ ಶರ್ಮಾ ನಾಯಕತ್ವದ ಆತಿಥೇಯ ಭಾರತ ತಂಡ 32.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರು ಹೀನಾಯವಾಗಿ ಸೋತ ಪಾಕಿಸ್ತಾನ ತಂಡವನ್ನು ಟೀಕಿಸಿದರೆ, ಅದ್ಭುತ ಗೆಲುವು ಸಾಧಿಸಿದ ಭಾರತ ತಂಡವನ್ನು ಶ್ಲಾಘಿಸಿದ್ದಾರೆ.

2011ರಂತೆ ಭಾರತ ತಂಡ ತಮ್ಮ ಶೌರ್ಯವನ್ನು ಪುನರಾವರ್ತಿಸಬಹುದು ಮತ್ತು ಪಾಕಿಸ್ತಾನದ ವಿರುದ್ಧ ಗೆದ್ದ ನಂತರ ಈ ಬಾರಿ ವಿಶ್ವಕಪ್ ಗೆಲ್ಲಬಹುದು ಎಂದು ನಾನು ನಂಬಲು ಪ್ರಾರಂಭಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತಮ್ಮ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡು ಅಸಾಧಾರಣ ಪ್ರದರ್ಶನ ನೀಡಿತು.
ರೋಹಿತ್ ಶರ್ಮಾ 63 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸೇರಿದಂತೆ 86 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಶ್ರೇಯಸ್ ಅಯ್ಯರ್ 62 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಜೇಯ 53 ರನ್‌ಗಳ ಅರ್ಧಶತಕದೊಂದಿಗೆ ಗೆಲುವಿನ ಬೌಂಡರಿ ಬಾರಿಸಿದರು.
ಇದಕ್ಕೂ ಮುನ್ನ ಪಾಕಿಸ್ತಾನ ಬ್ಯಾಟರ್‌ಗಳ ವಿರುದ್ಧ ಭಾರತೀಯ ಬೌಲರ್‌ಗಳು ಕೂಡ ಮಿಂಚಿದರು. ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಪಾಕಿಸ್ತಾನದ ಬ್ಯಾಟಿಂಗ್ ಲೈನ್‌ಅಪ್‌ನ ಅದ್ಭುತ ಕುಸಿತಕ್ಕೆ ಕಾರಣರಾದರು.
ಜಸ್ಪ್ರೀತ್ ಬುಮ್ರಾ ಏಳು ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರೆ, ಕುಲದೀಪ್ 10 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್‌ಗಳನ್ನು ಪಡೆದರು. ಭಾರತ ಮೂರು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮಾಜಿ ವೇಗಿ ಶೋಯೆಬ್ ಅಖ್ತರ್, ಭಾರತವು 2011ರಂತೆ ತಮ್ಮ ವೀರಾವೇಶವನ್ನು ಪುನರಾವರ್ತಿಸಲಿದೆ ಮತ್ತು ಮತ್ತೊಮ್ಮೆ ವಿಶ್ವಕಪ್ ಗೆಲ್ಲಲಿದೆ ಎಂದು ನಂಬಲು ಪ್ರಾರಂಭಿಸುತ್ತೇನೆ ಎಂದು ಹೇಳಿದರು.
"ಭಾರತವು 2011ರ ವಿಶ್ವಕಪ್‌ನ ಇತಿಹಾಸವನ್ನು ಪುನರಾವರ್ತಿಸಲಿದೆ ಎಂದು ನಾನು ನಂಬುತ್ತಿದ್ದೇನೆ. ಅವರು ಸೆಮಿಫೈನಲ್‌ನಲ್ಲಿ ಯಾವುದೇ ಗೊಂದಲಕ್ಕೀಡಾಗದಿದ್ದರೆ, ಈ ವಿಶ್ವಕಪ್ ಗೆಲ್ಲಲು ನಿಜವಾಗಿಯೂ ಭಾರತ ಉತ್ತಮವಾಗಿದೆ," ಎಂದರು.
"ಭಾರತ ತಂಡ ಅದ್ಭುತವಾಗಿ ಆಡುತ್ತಿದೆ. ಅವರು ನಮ್ಮನ್ನು ನಾಶಪಡಿಸಿದರು, ನಮ್ಮನ್ನು ನಿರಾಶೆಗೊಳಿಸಿದ್ದೀರಿ ಮತ್ತು ನಮ್ಮನ್ನು ನಾಶಗೊಳಿಸಿದ್ದೀರಿ," ಎಂದು ಶೋಯೆಬ್ ಅಖ್ತರ್ ಭಾರತ ತಂಡದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಭಾರತದ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಅವರು ಪಾಕಿಸ್ತಾನ ತಂಡವನ್ನು ಶಾಲಾ ಮಕ್ಕಳ ವಿರುದ್ಧ ಆಡಿದಂತೆ ಆಡಿ ಸೋಲಿಸಿದರು ಮತ್ತು ಅದನ್ನು ನೋಡಲು ನನಗೆ ಸಹಿಸಲಾಗಲಿಲ್ಲ. ರೋಹಿತ್ ಶರ್ಮಾ ನಿರ್ದಯವಾಗಿ ಆಡಿದರು,'' ಎಂದು ತಿಳಿಸಿದರು.