
ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಶಿಖರ್ ಧವನ್ ಕೂಡ ಒಬ್ಬರು. ಅದರಲ್ಲೂ ಏಕದಿನ ಸ್ವರೂಪದಲ್ಲಿ ರೋಹಿತ್ ಶರ್ಮಾ ಜೊತೆಗೆ ಅತ್ಯುತ್ತಮ ಜೊತೆಯಾಟದ ದಾಖಲೆ ಹೊಂದಿದ್ದಾರೆ.
ಆದರೆ, ಶಿಖರ್ ಧವನ್ ಅವರ ಕೊನೆಯ ಕೆಲವು ಸರಣಿಗಳಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಅದೇ ವೇಳೆಗೆ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಉತ್ತಮವಾಗಿ ಆಡುತ್ತಿದ್ದರಿಂದಾಗಿ ಶಿಖರ್ ಧವನ್ ತಂಡದ ಆಯ್ಕೆಯಿಂದ ಹೊರಗುಳಿದಿದ್ದಾರೆ.
ಶುಭ್ಮನ್ ಗಿಲ್ ಈ ವರ್ಷದ ಎಲ್ಲಾ ಸ್ವರೂಪದ ಆಟಗಳಲ್ಲಿ ಭಾರತದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ದ್ವಿಶತಕ ಸೇರಿದಂತೆ 2023ರಲ್ಲಿ ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದಾರೆ.
ಆರಂಭಿಕನಾಗಿ 23 ವರ್ಷದ ಶುಭ್ಮನ್ ಗಿಲ್ ಬ್ಯಾಟಿಂಗ್ ಫಾರ್ಮ್ 2023ರ ವಿಶ್ವಕಪ್ ಭಾರತ ತಂಡದಲ್ಲಿ ಅವರ ಸ್ಥಾನವನ್ನು ಹೆಚ್ಚು ಕಡಿಮೆ ಖಚಿತಪಡಿಸಿದೆ. ಶುಭ್ಮನ್ ಗಿಲ್ ಉತ್ತಮ ಪ್ರದರ್ಶನ ನೀಡುತ್ತಿರುವುದು ಶಿಖರ ಧವನ್ ಅವರ ಭಾರತ ತಂಡಕ್ಕೆ ಮರಳುವ ಅವಕಾಶದ ಬಾಗಿಲು ಮುಚ್ಚಿದಂತಾಗಿದೆ.

ಆದಾಗ್ಯೂ, ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇದೀಗ ಶುಭ್ಮನ್ ಗಿಲ್ ಅವರನ್ನು ಹಾಡಿ ಹೊಗಳಿದ್ದಾರೆ ಮತ್ತು ಖಂಡಿತವಾಗಿಯೂ ತಾನು ಶುಭ್ಮನ್ ಗಿಲ್‌ಗೆ ಅವಕಾಶ ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ.
ಆಜ್‌ತಕ್ ಜೊತೆ ಮಾತನಾಡಿದ ಶಿಖರ್ ಧವನ್, ಶುಭ್ಮನ್ ಗಿಲ್ ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಅಲ್ಲದೇ ತಮಗಿಂತ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರು.
ತಾನು ಭಾರತ ತಂಡದ ಆಯ್ಕೆಗಾರನಾಗಿದ್ದರೆ, ಖಂಡಿತವಾಗಿಯೂ ಶುಭ್ಮನ್ ಗಿಲ್ ಅವರನ್ನು ತಮಗಿಂತ ಮೊದಲು ಆಯ್ಕೆ ಮಾಡುತ್ತೇನೆ ಎಂದು ಸಿಖರ್ ಧವನ್ ಹೇಳಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
"ಶುಭ್ಮನ್ ಗಿಲ್ ಸದ್ಯ ಉತ್ತಮವಾಗಿ ಆಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಅವರು ಟೆಸ್ಟ್ ಮತ್ತು ಟಿ20 ಎರಡು ಫಾರ್ಮ್ಯಾಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡುತ್ತಿದ್ದಾರೆ, ನಾನು ಆಡುತ್ತಿರಲಿಲ್ಲ," ಎಂದಿದ್ದಾರೆ.

"ನಾನು ಭಾರತ ತಂಡದ ಆಯ್ಕೆಗಾರನಾಗಿದ್ದರೆ, ಖಂಡಿತವಾಗಿಯೂ ಶಿಖರ್ ಧವನ್‌ಗಿಂತ ಶುಭ್ಮನ್ ಗಿಲ್‌ಗೆ ಅವಕಾಶ ನೀಡುತ್ತಿದ್ದೆ," ಎಂದು ಸ್ವತಃ ಸಿಖರ್ ಧವನ್ ಹೇಳಿದ್ದಾರೆ.
ಇದೇ ವೇಳೆ, ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮನ್ನು ಹೇಗೆ ಬೆಂಬಲಿಸಿದರು ಎಂಬುದನ್ನು ಕೂಡ ಬಹಿರಂಗಪಡಿಸಿದ್ದು, 2023ರ ವಿಶ್ವಕಪ್‌ನತ್ತ ಗಮನಹರಿಸುವಂತೆ ತಿಳಿಸಿದ್ದಾರೆ ಎಂದು ಹೇಳಿದರು. 37 ವರ್ಷದ ಶಿಖರ್ ಧವನ್ 2022ರಲ್ಲಿ 22 ಏಕದಿನ ಪಂದ್ಯಗಳಿಂದ 688 ರನ್ ಗಳಿಸಿದ್ದಾರೆ.
"ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ನಂತರ, ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ನನಗೆ ಸಾಕಷ್ಟು ಬೆಂಬಲ ನೀಡಿದರು. ಅವರು ನಾನು ಕ್ರಿಕೆಟ್‌ನತ್ತ ಗಮನಹರಿಸಬೇಕು ಮತ್ತು ನನ್ನ ದೃಷ್ಟಿ ಮುಂದಿನ ವಿಶ್ವಕಪ್ ಆಗಿರಬೇಕು ಎಂದು ಹೇಳಿದ್ದಾರೆ. 2022ರಲ್ಲಿ ಏಕದಿನ ಪಂದ್ಯಗಳಲ್ಲಿ ನಾನು ಉತ್ತಮವಾಗಿ ಆಡಿದ್ದೆ," ಎಂದು ಶಿಖರ್ ಧವನ್ ತಿಳಿಸಿದರು.
"ಟಿ20 ಮತ್ತು ಟೆಸ್ಟ್ ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರನಿದ್ದಾನೆ. ಒಂದೆರಡು ಸರಣಿಯಲ್ಲಿ ನನ್ನ ಫಾರ್ಮ್ ಕುಸಿದಾಗ ಅವರು ಶುಭ್ಮನ್ ಗಿಲ್‌ಗೆ ಅವಕಾಶ ನೀಡಿದರು. ಆತ ನಿರೀಕ್ಷೆಗೆ ತಕ್ಕಂತೆ ಆಡುತ್ತಿದ್ದಾನೆ. ಆ ಪರಿಸ್ಥಿತಿಗೆ ನಾವು ಈಗಾಗಲೇ ಒಗ್ಗಿಕೊಂಡಿದ್ದೇನೆ".
"ಏಕದಿನ ಕ್ರಿಕೆಟ್‌ನಲ್ಲಿ ಇಶಾನ್ ಕಿಶನ್ ಬಾಂಗ್ಲಾದೇಶದ ವಿರುದ್ಧ ದ್ವಿಶತಕ ಬಾರಿಸಿದಾಗ, ಒಂದು ಕ್ಷಣ ನಾನು ತಂಡದಿಂದ ಹೊರಗುಳಿಯಬಹುದೆಂದು ಭಾವಿಸಿದ್ದೆ," ಎಂದು ಶಿಖರ್ ಧವನ್ ತಮ್ಮ ಮನದಾಳ ಹಂಚಿಕೊಂಡರು.