
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು (ಗುರುವಾರ, ಫೆಬ್ರವರಿ 9) ನಾಗ್ಪುರದಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ಆರಂಭಿಕ ವಿಕೆಟ್‌ಗಳನ್ನು ಕಿತ್ತು ಆಘಾತ ನೀಡಿದ್ದಾರೆ. ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಉಸ್ಮಾನ್ ಖವಾಜಾ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರೆ, ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಡೇವಿಡ್ ವಾರ್ನರ್ ಕ್ಲೀನ್ ಬೌಲ್ಡ್ ಆದರು.
ಇದೇ ವೇಳೆ, ಭಾರತ ತಂಡದ ಪರ ಸೂರ್ಯಕುಮಾರ್ ಯಾದವ್ ಮತ್ತು ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಕೆಎಸ್ ಭರತ್ ಅವರು ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದರು.
32 ವರ್ಷದ ಸೂರ್ಯಕುಮಾರ್ ಯಾದವ್ ತನ್ನ ಅಂತಾರಾಷ್ಟ್ರೀಯ ರೆಡ್‌ಬಾಲ್ ಕ್ರಿಕೆಟ್ ಆಡುವ ಕನಸು ಇದೀಗ ನನಸಾಗಿದ್ದು, ಗುರುವಾರ ತಮ್ಮ ಚೊಚ್ಚಲ ಪಂದ್ಯಕ್ಕಾಗಿ ಟೆಸ್ಟ್ ಕ್ಯಾಪ್ ಧರಿಸಿದರು. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆಎಸ್ ಭರತ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ಇನ್ನು 2022ರ ಅವಧಿಯಲ್ಲಿ ಟಿ20 ಪಂದ್ಯಗಳಲ್ಲಿ ಭಾರತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ ಯಾದವ್, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಕ್ಯಾಪ್ ಧರಿಸುತ್ತಿರುವ 304ನೇ ಅಟಗಾರನಾದರೆ, ಕೆಎಸ್ ಭರತ್ 305ನೇ ಭಾರತೀಯ ಆಟಗಾರನಾದರು.

ಬೆನ್ನುನೋವಿನಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಬದಲಾಗಿ ಸೂರ್ಯಕುಮಾರ್ ಯಾದವ್ ಅವರಿಗೆ ಚೊಚ್ಚಲ ಅವಕಾಶ ನೀಡಲಾಯಿತು. ಮಧ್ಯಮ ಕ್ರಮಾಂಕದ ಸ್ಥಾನಕ್ಕಾಗಿ ಶುಭ್ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ನಡುವಿನ ಸ್ಪರ್ಧೆಯಲ್ಲಿ ಸೂರ್ಯಕುಮಾರ್ ಮುನ್ನಡೆ ಪಡೆದರು.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ ಜೊತೆಗೆ ಕುಲದೀಪ್ ಯಾದವ್ ಕೂಡ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಾಗಲಿಲ್ಲ. ಅಕ್ಷರ್ ಪಟೇಲ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿದೆ.
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಸುದೀರ್ಘ ವಿಶ್ರಾಂತಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು. ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಕೊಂಡು ಆರು ತಿಂಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ.
ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಲಿದ್ದಾರೆ. 3ನೇ ಕ್ರಮಾಂಕದಲ್ಲಿ ಅನುಭವಿ ಚೇತೇಶ್ವರ ಪೂಜಾರ ಮತ್ತು 4ನೇ ಸ್ಥಾನದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೂವರು ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್‌ರನ್ನು ಆಡಿಸುತ್ತಿದ್ದರೆ, ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ದಾಳಿ ನಡೆಸುತ್ತಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್ (ಉಪನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೀಕಾರ್ ಭರತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶ್ಚಾಗ್ನೆ, ಸ್ಟೀವನ್ ಸ್ಮಿತ್, ಮ್ಯಾಟ್ ರೆನ್ಶಾ, ಪೀಟರ್ ಹ್ಯಾಂಡ್ಸ್‌ಕಾಂಬ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್