ಸಚಿನ್ ಮತ್ತು ಪಾಂಟಿಂಗ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 2 ರಂದು ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅರ್ಧಶತಕಗಳ ನೆರವಿನಿಂದ ಎಲ್ಲಾ ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು.
ಅತ್ತ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ. ಇನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ 14 ಓವರ್ ಬೌಲಿಂಗ್ ಮಾಡಿದ ಜೇಮ್ಸ್ ಆ್ಯಂಡರ್ಸನ್ 41 ರನ್ ನೀಡಿ ಒಂದು ವಿಕೆಟ್ ಪಡೆದರು. ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದ ಜೇಮ್ಸ್ ಆ್ಯಂಡರ್ಸನ್ ಇದೀಗ ಟೆಸ್ಟ್ ಕ್ರಿಕೆಟ್‍ನ ವಿಶೇಷ ದಾಖಲೆಯೊಂದರಲ್ಲಿ ರಿಕಿ ಪಾಂಟಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನೇ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ಹೌದು, ತವರು ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ಜೇಮ್ಸ್ ಆ್ಯಂಡರ್ಸನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದುವರೆಗೂ ಜೇಮ್ಸ್ ಆ್ಯಂಡರ್ಸನ್ ತನ್ನ ತವರು (ಇಂಗ್ಲೆಂಡ್) ನೆಲದಲ್ಲಿ 95 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಇತ್ತು. ತಮ್ಮ ತವರು ( ಭಾರತ ) ನೆಲದಲ್ಲಿ 94 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸಚಿನ್ ತೆಂಡೂಲ್ಕರ್, ತವರು ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. ಇದೀಗ ಈ ದಾಖಲೆಯನ್ನು ಇಂಗ್ಲೆಂಡ್ ಆಟಗಾರ ಜೇಮ್ಸ್ ಆ್ಯಂಡರ್ಸನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ತವರು ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ಟಾಪ್ 5 ಆಟಗಾರರು
ತಮ್ಮ ತವರು ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಆಟವನ್ನು ಆಡಿರುವ ಟಾಪ್ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..
1. ಜೇಮ್ಸ್ ಆ್ಯಂಡರ್ಸನ್ - 95 ಟೆಸ್ಟ್ ಪಂದ್ಯಗಳು
2. ಸಚಿನ್ ತೆಂಡೂಲ್ಕರ್ - 94 ಟೆಸ್ಟ್ ಪಂದ್ಯಗಳು
3. ರಿಕಿ ಪಾಂಟಿಂಗ್ - 92 ಟೆಸ್ಟ್ ಪಂದ್ಯಗಳು
4. ಅಲಸ್ಟೈರ್ ಕುಕ್ - 89 ಟೆಸ್ಟ್ ಪಂದ್ಯಗಳು
5. ಸ್ಟೀವ್ ವಾ - 89 ಟೆಸ್ಟ್ ಪಂದ್ಯಗಳು

191ಕ್ಕೆ ಭಾರತ ಆಲ್ ಔಟ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಅಕ್ಷರಶಃ ವಿಫಲರಾದರು. ಉಳಿದಂತೆ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಕೂಡ ಓವಲ್ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಆದರೆ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಇಬ್ಬರೂ ಸಹ ಅರ್ಧಶತಕಗಳನ್ನು ಸಿಡಿಸುವುದರ ಮೂಲಕ ಜವಾಬ್ದಾರಿಯುತ ಆಟವನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ 50 ಹಾಗೂ ಶಾರ್ದೂಲ್ ಠಾಕೂರ್ 57 ರನ್ ಬಾರಿಸುವುದರ ಮೂಲಕ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 191 ರನ್ ತಲುಪುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಪ್ರತ್ಯುತ್ತರವಾಗಿ ಮೊದಲನೇ ದಿನವೇ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 53 ರನ್‌ಗೆ 3 ವಿಕೆಟ್‍ಗಳನ್ನು ಕಳೆದುಕೊಂಡಿದೆ.

ಓವಲ್ ಕ್ರೀಡಾಂಗಣದಲ್ಲಿ ಕೊಹ್ಲಿ ಪಡೆ ಗೆದ್ದರೆ ಇತಿಹಾಸ!
ಪ್ರಸ್ತುತ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಮಣಿಸಿ ಜಯಗಳಿಸಿದರೆ ಇತಿಹಾಸ ನಿರ್ಮಾಣವಾಗಲಿದೆ. ಹೌದು, ಈ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದರೆ ಓವಲ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ 50 ವರ್ಷಗಳ ಬಳಿಕ ಗೆಲುವು ಸಾಧಿಸಿದ ಇತಿಹಾಸವನ್ನು ಟೀಮ್ ಇಂಡಿಯಾ ಬರೆಯಲಿದೆ. ಓವಲ್ ಕ್ರೀಡಾಂಗಣದಲ್ಲಿ ಇದುವರೆಗೂ ಟೀಮ್ ಇಂಡಿಯಾ 13 ಟೆಸ್ಟ್ ಪಂದ್ಯಗಳನ್ನಾಡಿದ್ದು 1971ರಲ್ಲಿ ನಡೆದ ಕೇವಲ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಈ ಬಾರಿಯ ಪಂದ್ಯದಲ್ಲಿ ಭಾರತ ಜಯ ಸಾಧಿಸಿದರೆ 50 ವರ್ಷಗಳ ಬಳಿಕ ಓವಲ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದಂತಾಗಿ ನೂತನ ಇತಿಹಾಸ ನಿರ್ಮಾಣವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications