ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸ ಮುಕ್ತಾಯವಾಗಿದೆ. ಅಂತಿಮ ಟಿ20 ಪಂದ್ಯ ಮಳೆಗೆ ಆಹುತಿಯಾದರೂ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನ ಅದ್ಭುತವಾಗಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಮೂಲಕ ಮುಂಬರುವ ಮಹತ್ವದ ಟೂರ್ನಿಗಳ ದೃಷ್ಟಿಯಿಂದ ಈ ಸರಣಿ ಸಾಕಷ್ಟು ಸಕಾರಾತ್ಮಕ ಬಲ ನೀಡಿದೆ.
ಈ ಸರಣಿಗೆ ಟೀಮ್ ಇಂಡಿಯಾ ಜಸ್ಪ್ರೀತ್ ಬೂಮ್ರಾ ನೇತೃತ್ವದ ಯುವ ಆಟಗಾರರ ಪಡೆಯನ್ನು ಕಣಕ್ಕಿಳಿಸಿತ್ತು. ಅಲ್ಲದೆ ಸ್ವತಃ ಬೂಮ್ರಾ ಹಾಗೂ ಪ್ರಸಿದ್ಧ್ ಕೃಷ್ಣಗೆ ಇದು ಗಾಯದಿಂದಾಗಿ ವಿರಾಮದ ಬಳಿಕ ಕಮ್‌ಬ್ಯಾಕ್ ಸರಣುಯಾಗಿದ್ದು ಇಬ್ಬರು ಆಟಗಾರರು ಕೂಡ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಕಾರಣ ಈ ಸರಣಿ ಈ ಇಬ್ಬರಿಗೂ ಲಯವನ್ನು ಕಂಡುಕೊಳ್ಳಲು ನಿರ್ಣಾಯಕವಾಗಿತ್ತು.

ಇನ್ನು ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ವಶಕ್ಕೆ ಪಡೆದುಕೊಂಡ ಟೀಮ್ ಇಂಡಿಯಾಗೆ ಈ ಸರಣಿಯಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳು ಬಲ ನೀಡಿದೆ. ಅಂಥಾ ಐದು ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..
ಈ ಸರಣಿಯಲ್ಲಿ ಬಹುತೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಇದ್ದಿದ್ದು ಜಸ್ಪ್ರೀತ್ ಬೂಮ್ರಾ ಮೇಲೆ. ಗಾಯದಿಂದಾಗಿ ಸುದೀರ್ಘ 10 ತಿಂಗಳ ವಿರಾಮದ ಬಳಿಕ ಬೂಮ್ರಾ ಕಮ್‌ಬ್ಯಾಕ್ ಮಾಡಿದ್ದರು. ಏಷ್ಯಾಕಪ್ ಹಾಗೂ ವಿಶ್ವಕಪ್ ಸನಿಹದಲ್ಲಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಜ್ಜಾದ ಬೂಮ್ರಾ ಐರ್ಲೆಂಡ್ ಪ್ರವಾಸವನ್ನು ಕಮ್‌ಬ್ಯಾಕ್‌ಗೆ ವೇದಿಕೆಯಾಗಿ ಅದ್ಭುತವಾಗಿ ಬಳಸಿಕೊಂಡರು. ಈ ಮೂಲಕ ಫಿಟ್‌ನೆಸ್ ಮಾತ್ರವಲ್ಲದೆ ಫಾರ್ಮ್ ಬಗ್ಗೆಯೂ ಇದ್ದ ಅನುಮಾನಕ್ಕೆ ಬೂಮ್ರಾ ಉತ್ತರ ನೀಡಿದ್ದಾರೆ. ಇನ್ನು ಬೂಮ್ರಾ ಈ ಸರಣಿಯಲ್ಲಿ 8 ಓವರ್‌ಗಳ ಬೌಲಿಂಗ್ ಮಾಡಿದ್ದು 4 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು ಬೂಮ್ರಾ ರೀತಿಯಲ್ಲಿಯೇ ಪ್ರಸಿದ್ಧ್ ಕೃಷ್ಣ ಕೂಡ ಗಾಯದಿಂದ ಸುದೀರ್ಘ ಕಾಲದಿಂದ ತಂಡದಿಂದ ದೂರವುಳಿದಿದ್ದು ಈ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಿದರು. ಕೃಷ್ಣ ಕೂಡ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದು ಆಡಿದ ಎರಡು ಪಂದ್ಯದಲ್ಲಿಯೂ ಭರ್ಜರಿಯಾಗಿ ಮಿಂಚುವ ಮೂಲಕ ಗಮನಸೆಳೆದಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಹಾಗೂ ಡೆತ್ ಓವರ್‌ನಲ್ಲಿ ವಿಕೆಟ್‌ಗಳನ್ನು ಪಡೆಯುವಲ್ಲಿ ಕೃಷ್ಣ ಯಶಸ್ವಿಯಾಗಿದ್ದು ಅವರ ಲಯದ ಮೇಲಿದ್ದ ಅನುಮಾನಗಳಿಗೂ ಉತ್ತರ ನೀಡಿದ್ದಾರೆ.
ಇನ್ನು ಈ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಮತ್ತೋರ್ವ ಆಟಗಾರ ರಿಂಕು ಸಿಂಗ್. ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ರಿಂಕು ಸಿಂಗ್ ಭಾರತ ತಂಡದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡಿದ್ದರು. ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ರಿಂಕು ಆಡಿದ ಮೊದಲ ಪಂದ್ಯದಲ್ಲಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಗಮನಸೆಳೆದಿದ್ದಾರೆ. ಫಿನಿಷರ್ ಆಗಿ ರಿಂಕು ಸಿಂಗ್ ನೀಡಿದ ಪ್ರದರ್ಶನದಿಂದಾಗಿ ಭಾರತಕ್ಕೆ ಸುದೀರ್ಘ ಕಾಲಕ್ಕೆ ಬೇಕಾಗಿರುವ ಓರ್ವ ಅತ್ಯುತ್ತಮ ಫಿನಿಷರ್ ದೊರೆತಿದ್ದಾರೆ ಎಂದು ವಿಶ್ಲೇಷಣೆಗಳು ನಡೆಯುತ್ತಿದೆ.
ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಈ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಸರಣಿಯ 2 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ ರವಿ ಬಿಷ್ಣೋಯ್. ಏಷ್ಯನ್ ಗೇಮ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಜೊತೆಗೆ ಕಣಕ್ಕಿಳಿಯಲಿರುವ ಕಾರಣ ಈ ಪ್ರದರ್ಶನ ಕೂಡ ಬಹಳ ಮುಖ್ಯವೆನಿಸಿದೆ. ಏಷ್ಯನ್ ಗೇಮ್ಸ್‌ನಲ್ಲಿ ಯುವ ಆಟಗಾರರೇ ತುಂಬಿರುವ ಕಾರಣ ಬಿಷ್ಣೋಯ್ ಫಾರ್ಮ್ ಕೂಡ ಮಹತ್ವ ಪಡೆದುಕೊಂಡಿತ್ತು.
ಇನ್ನು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎಂದರೆ ಅದು ಋತುರಾಜ್ ಗಾಯಕ್ವಾಡ್. ಈ ಸರಣಿಯಲ್ಲಿ ಋತು ಪ್ರದರ್ಶನ ಅದ್ಭುತವಾಗಿತ್ತು. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪಡೆಯನ್ನು ಮುನ್ನಡೆಸುವ ಜವಾಬ್ಧಾರಿ ಕೂಡ ಋತುರಾಜ್ ಮೇಲಿರುವ ಕಾರಣ ಈ ಸರಣಿಯಲ್ಲಿ ಉಪನಾಯಕನಾಗಿಯೂ ಅವರು ಉತ್ತಮ ಅನುಭವ ಪಡೆದುಕೊಂಡಿದ್ದಾರೆ. ಈ ಸರಣಿಯ ಮೊದಲ ಪಂದ್ಯದಲ್ಲಿ 19 ರನ್‌ಗಳಿಸಿದ್ದ ಋತು ಎರಡನೇ ಪಂದ್ಯದಲ್ಲಿ 77 ರನ್‌ಗಳನ್ನು ಗಳಿಸಿದ್ದರು. ಈ ಮೂಲ ಏಷ್ಯನ್ ಗೇಮ್ಸ್‌ಗೆ ಉತ್ತಮ ಸಿದ್ಧತೆ ಮಾಡಿಕೊಂಡಿದ್ದಾರೆ.