IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್

ಭಾನುವಾರ, ಜನವರಿ 29ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ 6 ವಿಕೆಟ್‌ಗಳ ಜಯ ದಾಖಲಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿ, ಸರಣಿಯನ್ನು ಜೀವಂತವಾಗಿರಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಭಾರತದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತು ಮತ್ತು ಭಾರತಕ್ಕೆ 100 ರನ್‌ಗಳ ಗುರಿ ನೀಡಿತು.
ಭಾರತದ ಪರ ಅರ್ಶ್‌ದೀಪ್ ಸಿಂಗ್ ಎರಡು ವಿಕೆಟ್ ಪಡೆದು ಮಿಂಚಿದರೆ, ಉಳಿದಂತೆ ಯುಜ್ವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.

ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಜೊತೆಯಾಟ
ಸಾಧಾರಣ ಮೊತ್ತ ಬೆನ್ನತ್ತಿದ ಆತಿಥೇಯ ಭಾರತ ತಂಡ 46 ರನ್‌ಗಳಾಗಿದ್ದಾಗ ಆರಂಭಿಕರಾದ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ, ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರ ಜೋಡಿ ಒಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ಗುರಿ ತಲುಪಿಸಿತು.
ಎರಡನೇ ಟಿ20 ಪಂದ್ಯದ ನಂತರ, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ತನ್ನ ಬ್ಯಾಟಿಂಗ್ ಕೋಚ್ ಎಂದು ಸೂರ್ಯಕುಮಾರ್ ಯಾದವ್ ಬಹಿರಂಗಪಡಿಸಿದರು.
ನಾನು ಚಹಾಲ್‌ರಿಂದ ಇನ್ನಷ್ಟು ಕಲಿಯಲು ಬಯಸುತ್ತೇನೆ
'ಚಹಾಲ್ ಟಿವಿ'ಯಲ್ಲಿ ಸೂರ್ಯಕುಮರ್ ಯಾದವ್, ಚಾಹಲ್ ಮತ್ತು ಕುಲದೀಪ್ ಯಾದವ್ ನಡುವಿನ ಮಾತುಕತೆಯಲ್ಲಿ ಭಾರತೀಯ ಸ್ಫೋಟಕ ಬ್ಯಾಟರ್ ಈ ಸಂಗತಿಯನ್ನು ತಿಳಿಸಿದರು.
"ಕಳೆದ ಸರಣಿಯಲ್ಲಿ ಯುಜ್ವೇಂದ್ರ ಚಹಾಲ್ ಅವರು ನನಗೆ ನೀಡಿದ ಬ್ಯಾಟಿಂಗ್ ಸಲಹೆಯನ್ನು ನಾನು ಅನುಸರಿಸಿದೆ. ನಾನು ಅವರಿಂದ ಇನ್ನಷ್ಟು ಕಲಿಯಲು ಬಯಸುತ್ತೇನೆ, ಅವರು ನನ್ನ ಬ್ಯಾಟಿಂಗ್ ಕೋಚ್," ಎಂದು ನಗುತ್ತಾ ಸೂರ್ಯಕುಮಾರ್ ಯಾದವ್ ಹೇಳಿದರು.

ಪರಿಸ್ಥಿತಿಗೆ ತಕ್ಕಂತೆ ನಿಧಾನಗತಿ ಬ್ಯಾಟಿಂಗ್ ಮಾಡಬೇಕಾಯಿತು
ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಕಠಿಣ ಬ್ಯಾಟಿಂಗ್ ನಡೆಸಬೇಕಾಯಿತು ಎಂಬುದನ್ನು ಒಪ್ಪಿಕೊಂಡ ಸೂರ್ಯಕುಮಾರ್, "ಈ ಪಿಚ್ ಬಹಳ ಸವಾಲಿನ ವಿಕೆಟ್ ಹೊಂದಿತ್ತು, ಹಾಗಾಗಿ ಪರಿಸ್ಥಿತಿಗೆ ತಕ್ಕಂತೆ ನಿಧಾನಗತಿ ಬ್ಯಾಟಿಂಗ್ ಮಾಡಬೇಕಾಯಿತು," ಎಂದರು.
ಈ ವಿಡಿಯೋದಲ್ಲಿ ಮತ್ತೊಬ್ಬ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಕಾಣಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದ ಯುಜ್ವೇಂದ್ರ ಚಹಾಲ್ ಅವರನ್ನು ಅಭಿನಂದಿಸಿದರು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಚಾಹಲ್ ಒಂದು ವಿಕೆಟ್ ಪಡೆಯುತ್ತಿದ್ದಂತೆ, ಅವರ ವಿಕೆಟ್‌ಗಳ ಸಂಖ್ಯೆಯನ್ನು 91ಕ್ಕೆ ಏರಿಸಿದರು ಮತ್ತು 90 ವಿಕೆಟ್‌ಗಳನ್ನು ಪಡೆದಿರುವ ಭುವನೇಶ್ವರ್ ಕುಮಾರ್ ಅವರನ್ನು ಹಿಂದಿಕ್ಕಿದರು.

ಪ್ರವಾಸಿ ತಂಡವನ್ನು 99 ರನ್‌ಗಳಿಗೆ ಕಟ್ಟಿಹಾಕಿದ ತ್ರಿವಳಿ ಸ್ಪಿನ್ನರ್‌ಗಳು
ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ತ್ರಿವಳಿ ಸ್ಪಿನ್ನರ್‌ಗಳು ಪ್ರವಾಸಿ ತಂಡವನ್ನು 99 ರನ್‌ಗಳಿಗೆ ಕಟ್ಟಿಹಾಕಲು ಯಶಸ್ವಿಯಾದರು. ಇದು ಚುಟುಕು ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಕಿವೀಸ್ ಪಡೆಯ ಕಡಿಮೆ ಮೊತ್ತವಾಗಿದೆ.
100 ರನ್‌ಗಳ ಚೇಸಿಂಗ್‌ನಲ್ಲಿ ಭಾರತ ಪರ ಇಶಾನ್ ಕಿಶನ್ 32 ಎಸೆತಗಳಲ್ಲಿ 19 ರನ್, ಶುಭ್ಮನ್ ಗಿಲ್ 9 ಎಸೆತಗಳಲ್ಲಿ 11 ರನ್ ಮತ್ತು ರಾಹುಲ್ ತ್ರಿಪಾಠಿ 18 ಎಸೆತಗಳಲ್ಲಿ 13 ರನ್ ಗಳಿಸಿದರು. ಭಾರತೀಯ ಬ್ಯಾಟ್ಸ್‌ಮನ್‌ಗಳು ಎದುರಾಳಿ ಬೌಲಿಂಗ್ ವಿರುದ್ಧ ಹೋರಾಟ ನಡೆಸಬೇಕಾಯಿತು.
ಅಂತಿಮವಾಗಿ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ 15 ರನ್ ಮತ್ತು ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸಿ, ಭಾರತವನ್ನು ಗೆಲ್ಲಿಸಿದರು. ಮೂರು ಪಂದ್ಯಗಳ ಸರಣಿಯ ಅಂತಿಮ ಟಿ20 ಮತ್ತು ಸರಣಿ ನಿರ್ಣಾಯಕ ಪಂದ್ಯ ಬುಧವಾರ, ಫೆಬ್ರವರಿ 1ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications