IND vs PAK: ಕೊಹ್ಲಿ, ರೋಹಿತ್, ಕೆಎಲ್ ರಾಹುಲ್ ಬ್ಯಾಟಿಂಗ್ ವಿಧಾನ ಬಗ್ಗೆ ಗಂಭೀರ್ ದೊಡ್ಡ ಹೇಳಿಕೆ

ಸದ್ಯ ನಡೆಯುತ್ತಿರುವ ಏಷ್ಯಾ ಕಪ್ 2022ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೋಲ್ಟೇಜ್ ಪೈಪೋಟಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಐದು ವಿಕೆಟ್‌ಗಳಿಂದ ಮೆನ್ ಇನ್ ಬ್ಲೂ ತಂಡವನ್ನು ಸೋಲಿಸುವುದರೊಂದಿಗೆ ಸಂಪೂರ್ಣ ರೋಮಾಂಚನಕಾರಿಯಾಗಿ ಕೊನೆಗೊಂಡಿತು.
ಎರಡೂ ತಂಡಗಳ ಕೆಲವು ಉತ್ತಮ ವೈಯಕ್ತಿಕ ಪ್ರದರ್ಶನಗಳೊಂದಿಗೆ ಮೊಹಮ್ಮದ್ ರಿಜ್ವಾನ್ ಅವರು 51 ಎಸೆತಗಳಲ್ಲಿ 71 ರನ್ ಗಳಿಸಿದರು ಮತ್ತು ಪಾಕಿಸ್ತಾನವನ್ನು ಗೆಲುವಿನತ್ತ ಮುನ್ನಡೆಸಿದರು. ಸ್ಟಾರ್ ಸ್ಪೋರ್ಟ್ಸ್ ಶೋ 'ಫಾಲೋ ದಿ ಬ್ಲೂಸ್'ನಲ್ಲಿ ಮಾತನಾಡಿದ ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಅನ್ನು ಮರಳಿ ಪಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
"ತುಂಬಾ ಚೆನ್ನಾಗಿದೆ, ವಾಸ್ತವವಾಗಿ ವಿರಾಟ್ ಕೊಹ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದರು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ವಿಧಾನವನ್ನು ನಾನು ಇಷ್ಟಪಟ್ಟೆ. ನಂತರ ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ. ಆ ಹುಡುಗರೆಲ್ಲರೂ ಚೆನ್ನಾಗಿ ಆಡಿದರು, ಆದರೆ ವಿರಾಟ್ ಕೊಹ್ಲಿ ತುಂಬಾ ಚೆನ್ನಾಗಿದ್ದರು. ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಅವರು ಬ್ಯಾಟ್ ಮಾಡಿದ ನಂತರ ಹಿಂತಿರುಗಿರುವುದು, ಅವರು ವಿಶೇಷವಾಗಿ ಆ ವಿಶ್ವಾಸವನ್ನು ಮರಳಿ ಪಡೆದಿದ್ದಾರೆ ಎಂದು ತೋರಿಸಿದೆ. ನಿಜವಾಗಿಯೂ ಉತ್ತಮವಾಗಿ ಕಾಣುತ್ತದೆ ಮತ್ತು ಅವರು ಇದೇ ಫಾರ್ಮ್ ಅನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಗಂಭೀರ್ ಹೇಳಿದರು.

ಭಾರತೀಯ ಬೌಲರ್‌ಗಳ ಮೇಲೆ ಒತ್ತಡವು ಬಹಳಷ್ಟು ಇತ್ತು
ರವಿ ಬಿಷ್ಣೋಯ್ ಮತ್ತು ಅರ್ಷದೀಪ್ ಸಿಂಗ್ ಅವರ ಅತ್ಯುತ್ತಮ ಪ್ರದರ್ಶನದೊಂದಿಗೆ ಪಾಕಿಸ್ತಾನವನ್ನು ಸೋಲಿಸಲು ಭಾರತೀಯ ಬೌಲಿಂಗ್ ತಂಡವು ಅತ್ಯುತ್ತಮವಾಗಿ ಪ್ರಯತ್ನಿಸಿತು. ಆದರೆ ಕೊನೆಯಲ್ಲಿ ಪರಿಸ್ಥಿಗಳು ಅಂದುಕೊಂಡಂತೆ ನಡೆಯಲಿಲ್ಲ.
ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಭಾರತದ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ ಮತ್ತು ಅವರು ಆಟದಲ್ಲಿ ಯುವಕರನ್ನು ಕೊಂಡಾಡಿದ್ದಾರೆ. "ಬೌಲಿಂಗ್‌ಗೆ ಸಂಬಂಧಿಸಿದಂತೆ, ನಿಸ್ಸಂಶಯವಾಗಿ ಈ ಬೌಲಿಂಗ್ ಘಟಕವು ಅನೇಕ ವಿಭಾಗಗಳಲ್ಲಿ ಉತ್ತಮವಾಗಬೇಕಾಗಿದೆ. ಆದರೆ ಮೊದಲಾರ್ಧದಲ್ಲಿ ಅವರು ಚೆನ್ನಾಗಿ ಬೌಲ್ ಮಾಡಿದರು, ವಿಶೇಷವಾಗಿ ರವಿ ಬಿಷ್ಣೋಯ್ ತಮ್ಮ ಮೊದಲ ಪಂದ್ಯವನ್ನು ಈ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದರು. ಆದರೆ ಅವರು ಪವರ್ ಪ್ಲೇ ಅನ್ನು ನಿಭಾಯಿಸಿದ ರೀತಿ ಮತ್ತು ಬಾಬರ್ ಅಜಂ ಅವರ ವಿಕೆಟ್ ಪಡೆದಿದ್ದು ಅದ್ಭುತವಾಗಿತ್ತು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳ ಮೇಲೆ ಒತ್ತಡವು ಬಹಳಷ್ಟು ಇತ್ತು. ರವಿ ಬಿಷ್ಣೋಯ್ ಆ ಒತ್ತಡವನ್ನು ಚೆನ್ನಾಗಿ ನಿಭಾಯಿಸಿದ್ದಾರೆ," ಎಂದು ಮಾಜಿ ವೇಗಿ ಇರ್ಫಾನ್ ಪಠಾಣ್ ಹೇಳಿದರು.

ರೋಹಿತ್ ನಾಯಕತ್ವದ ಬಗ್ಗೆಯೂ ಪಠಾಣ್ ಪ್ರತಿಕ್ರಿಯೆ
ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆಯೂ ಇರ್ಫಾನ್ ಪಠಾಣ್ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಬೌಲರ್‌ಗಳನ್ನು ಹೇಗೆ ತಿರುಗಿಸಿದರು ಮತ್ತು ಸರಿಯಾದ ಕ್ಷಣಗಳಲ್ಲಿ ಸ್ಪಿನ್ನರ್ ಅನ್ನು ಹೇಗೆ ಬಳಸಿಕೊಂಡರು ಎಂಬುದರ ಬಗ್ಗೆ ಹೊಗಳಿದರು. "ಒಬ್ಬ ನಾಯಕನನ್ನು ಎರಡು ವಿಷಯಗಳ ಮೇಲೆ ಪರೀಕ್ಷಿಸಬಹುದು, ವಿಶೇಷವಾಗಿ ಅವನು ಬೌಲರ್ ಅನ್ನು ಹೇಗೆ ನಿಭಾಯಿಸುತ್ತಾನೆ, ವಿಶೇಷವಾಗಿ ಬೌಲರ್‌ಗಳು ಹೊಸಬರಾಗಿದ್ದಾಗ ಮತ್ತು ನೀವು ರನ್ ಡಿಫೆಂಡ್ ಮಾಡುವಾಗ. ನಾನು ಮತ್ತೆ ಮತ್ತೆ ನೋಡಿದ್ದೇನೆ ರೋಹಿತ್ ಶರ್ಮಾ ಅದ್ಭುತ ನಾಯಕ," ಎಂದರು.
"ರೋಹಿತ್ ಶರ್ಮಾ ನಿಜವಾಗಿಯೂ ಬೌಲರ್‌ಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ, ಯಾವ ಬೌಲರ್ ಅನ್ನು ಯಾವಾಗ ಆಡಿಸಬೇಕೆಂದು ಅವರಿಗೆ ತಿಳಿದಿದೆ. ಅವರು ಪವರ್ ಪ್ಲೇ ಸಮಯದಲ್ಲಿ ಬಿಷ್ಣೋಯ್ ಅವರನ್ನು ಬೌಲ್ ಮಾಡಿಸಿದರು. ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಕೇವಲ 8 ರನ್ ನೀಡಿದರು".

ಸತತ ಎರಡನೇ ಅರ್ಧಶತಕವನ್ನು ದಾಖಲಿಸಿದ ಕೊಹ್ಲಿ
"ರೋಹಿತ್ ಶರ್ಮಾ ತಂಡವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಮತ್ತು ಇಡೀ ತಂಡವು ಹಿಂತಿರುಗಿದಾಗ ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ತಂಡದಿಂದ ನಾವು ಉತ್ತಮ ಪ್ರದರ್ಶನವನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ," ಎಂದು ತಿಳಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್ ಬಾರಿಸುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಸತತ ಎರಡನೇ ಅರ್ಧಶತಕವನ್ನು ದಾಖಲಿಸಿದರು. ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ತಲಾ 28 ರನ್ ಗಳಿಸಿದರು ಮತ್ತು ಸ್ಫೋಟಕ 54 ರನ್ ಆರಂಭಿಕ ಜೊತೆಯಾಟವನ್ನು ದಾಖಲಿಸಿದರು.
ಪಾಕ್ ಸ್ಪಿನ್ನರ್ ಶಾದಾಬ್ ಖಾನ್ (2/31) ಪಾಕಿಸ್ತಾನದ ಪರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದರು. ವೇಗಿಗಳಾದ ನಸೀಮ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್ ಮತ್ತು ಹ್ಯಾರಿಸ್ ರೌಫ್ ತಲಾ ಒಂದು ವಿಕೆಟ್ ಪಡೆದರು.

ಒಂದು ಎಸೆತ ಬಾಕಿ ಇರುವಂತೆಯೇ ಅಂತಿಮ ಗುರಿ ತಲುಪಿದ ಪಾಕ್
182 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ, ನಾಯಕ ಬಾಬರ್ ಅಜಂ ಮತ್ತು ಫಖರ್ ಜಮಾನ್ ಅವರನ್ನು ಕಡಿಮೆ ರನ್‌ಗಳಿಗೆ ಕಳೆದುಕೊಂಡಿತು. ಆದರೆ ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ನವಾಜ್ 73 ರನ್ ಜೊತೆಯಾಟ ನಡೆಸಿ ತಮ್ಮ ತಂಡವನ್ನು ಪಂದ್ಯದಲ್ಲಿ ಜೀವಂತವಾಗಿರಿಸಿದರು. 20 ಎಸೆತಗಳಲ್ಲಿ 42 ರನ್ ಗಳಿಸಿದ್ದ ನವಾಜ್ ಔಟಾದ ಬಳಿಕ ಹಾಗೂ 51 ಎಸೆತಗಳಲ್ಲಿ 71 ರನ್ ಗಳಿಸಿದ್ದ ರಿಜ್ವಾನ್ ಔಟಾದ ನಂತರ ಟೀಂ ಇಂಡಿಯಾ ಆಟದಲ್ಲಿ ಮತ್ತೆ ಗೆಲುವಿನ ಅವಕಾಶಗಳನ್ನು ಪಡೆದುಕೊಂಡಿತು.
ಆದರೆ ಖುಸ್ದಿಲ್ ಶಾ (14*) ಮತ್ತು ಆಸಿಫ್ ಅಲಿ (16) ಐದು ವಿಕೆಟ್‌ಗಳ ಅಂತರ ಮತ್ತು ಒಂದು ಎಸೆತ ಬಾಕಿ ಇರುವಂತೆಯೇ ಅಂತಿಮ ಗುರಿಯನ್ನು ದಾಟಲು ಪ್ರಮುಖ ಕೊಡುಗೆ ನೀಡಿದರು.
ಭಾರತ ಪರ ರವಿ ಬಿಷ್ಣೋಯ್ (1/26) ಮತ್ತು ಅರ್ಷದೀಪ್ ಸಿಂಗ್ (1/27) ಉತ್ತಮ ಅಂಕಿಅಂಶ ದಾಖಲಿಸಿದ ಬೌಲರ್‌ಗಳು. ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ಯುಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು. 42 ರನ್ ಮತ್ತು 1/25 ಆಲ್‌ರೌಂಡ್ ಪ್ರದರ್ಶನಕ್ಕಾಗಿ ನವಾಜ್ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications