IND vs PAK T20 World Cup: ಭಾರತ-ಪಾಕ್ ಹೈವೋಲ್ಟೇಜ್ ಫೈಟ್: ಸ್ಪಿನ್ ಬೌಲರ್ಸ್ ಮೇಲೆ ಕಣ್ಣು
ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಭಾನುವಾರ (ಫೆ.15) ಕೊಲಂಬೊದಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ವಿಶ್ವದ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದೆ. ಭಾರತ ಸಹ ಈ ಪಂದ್ಯವನ್ನು ಗೆಲ್ಲುವ ಹಾಟ್ ಫೆವರೀಟ್ ತಂಡ. ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಟೀಮ್ ಇಂಡಿಯಾ ಕಸರತ್ತು ನಡೆಸುತ್ತಿದೆ. ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಲು ಭಾರತ ಹಾಗೂ ಪಾಕ್ ತಂಡಗಳು ಕಾದಾಟ ನಡೆಸಲಿವೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಭಾರತ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಪಾಕ್ ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಕಳೆದ ಕೆಲವು ದಿನಗಳ ಹಿಂದೆ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದ ಪಾಕ್ ಸರ್ಕಾರ, ಕೊನೆಗೆ ಪಟ್ಟು ಸಡಿಲಿಸಿ ಆಟಗಾರರಿಗೆ ಪಂದ್ಯ ಆಡಲು ಗ್ರೀನ್ ಸಿಗ್ನಲ್ ನೀಡಿದೆ.

ಎರಡೂ ತಂಡಗಳು ಮೈದಾನಕ್ಕೆ ಇಳಿದಾಗಲೆಲ್ಲಾ ಹೈವೋಲ್ಟೇಜ್ ಕಾವು ಎದ್ದು ಕಾಣುತ್ತಿದೆ. ಹತ್ತು ಹಲವು ದೃಷ್ಟಿಗಳಿಂದ ಈ ಪಂದ್ಯ ಮಹತ್ವ ಪಡೆದಿರುತ್ತದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ಯಾರು ಸಮರ್ಥವಾಗಿ ಎದುರಿಸುತ್ತಾರೋ ಅವರು ಪಂದ್ಯವನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.
ಆರಂಭಿಕರ ಮೇಲೆ ಕಣ್ಣು
ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸುತ್ತಿದೆ. ಇದೇ ಶೈಲಿಯನ್ನು ಕೊಲಂಬೊದಲ್ಲಿ ಮುಂದುವರೆಸುವ ಇರಾದೆ ಭಾರತ ತಂಡದ್ದಾಗಿದೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಫಿಟ್ ಆಗಿದ್ದರೆ ತಂಡಕ್ಕೆ ಆನೆ ಬಲ ಬಂದಂತೆ ಆಗುತ್ತದೆ. ಇಶಾನ್ ಕಿಶನ್ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದು ಎಲ್ಲರ ಚಿತ್ತ ಕದ್ದಿದ್ದಾರೆ. ಅಭಿಷೇಕ್ ಈ ಪಂದ್ಯದಲ್ಲಿ ಆಡದೇ ಇದ್ದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಲಭಿಸಬಹುದು.
ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಪಾಕ್ ಸ್ಪಿನ್ ಬೌಲರ್‌ಗಳ ವಿರುದ್ಧ ಸೂರ್ಯ ಪಡೆ ಹೇಗೆ ಆಡುತ್ತದೆ ಎಂಬುದೇ ದೊಡ್ಡ ಸವಾಲಾಗಿದೆ. ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಮಹತ್ವದ ಪಂದ್ಯದಲ್ಲಿ ಸಮಯೋಚಿತ ಆಟವನ್ನು ಆಡಬೇಕಿದೆ.

ಕೊಲಂಬೊ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದ್ದು, ಟೀಮ್ ಇಂಡಿಯಾ ಇಬ್ಬರು ನುರಿತ ಸ್ಪಿನ್ ಬೌಲರ್‌ಗಳಾದ ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿಗೆ ಅವಕಾಶ ನೀಡಬಹುದು. ಇನ್ನು ಜಸ್ಪ್ರೀತ್ ಬುಮ್ರಾ ಮಾತ್ರ ವೇಗದ ಬೌಲರ್ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆಯಬಹುದಾಗಿದೆ.
ಸ್ಪಿನ್ ಬಲ
ಪಾಕಿಸ್ತಾನ ತಂಡಕ್ಕೆ ಸ್ಪಿನ್ ಬೌಲರ್‌ಗಳೇ ಬಲವಾಗಿದ್ದಾರೆ. ತಂಡದಲ್ಲಿ ನಾಲ್ವರು ಸ್ಪಿನ್ ಬೌಲರ್‌ಗಳು ಇದ್ದು ತಂಡಕ್ಕೆ ಆಧಾರವಾಗಬಲ್ಲರು. ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಹಾಗೂ ಅಭಿಷೇಕ್ ಶರ್ಮಾ ಅವರ ಕಾಳಗ ನೋಡಲು ಕ್ರಿಕೆಟ್ ಜಗತ್ತು ಕಾದು ಕುಳಿತಿದೆ. ಟಾಪ್ ಆರ್ಡರ್ ಬ್ಯಾಟರ್‌ಗಳು ಭಾರತದ ವಿರುದ್ಧ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದೇ ಪ್ರಶ್ನೆಯಾಗಿದೆ. ಕಾರಣ ಭಾರತದ ಬೌಲಿಂಗ್, ಬ್ಯಾಟಿಂಗ್‌ನಷ್ಟೇ ಬಲಿಷ್ಠವಾಗಿದೆ.
ಮಳೆ ಕಾಟ
ಕೊಲಂಬೊದಲ್ಲಿ ಭಾನುವಾರ ಮಳೆ ಬೀಳುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬಂದಲ್ಲಿ ಓವರ್‌ಗಳಿಗೆ ಕತ್ತರಿ ಬೀಳುತ್ತದೆ. ಟಿ20 ಕ್ರಿಕೆಟ್‌ನಲ್ಲಿ ಫಲಿತಾಂಶ ತಿಳಿಯಲು ಕನಿಷ್ಠ 5 ಓವರ್‌ಗಳ ಪಂದ್ಯಗಳು ನಡೆಯುವುದು ಅನಿವಾರ್ಯ. ಬಿಟ್ಟು ಬಿಡದೇ ಮಳೆ ಸುರಿದು ಪಂದ್ಯ ರದ್ದಾದಲ್ಲಿ ಉಭಯ ತಂಡಗಳಿಗೆ ಒಂದು ಅಂಕ ನೀಡಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications