IND vs PAK: ಪಾಕ್ ವಿರುದ್ಧ ಭಾರತ ಟಿ ಟ್ವೆಂಟಿ ಸೋತದ್ದು 2 ಬಾರಿ ಮಾತ್ರ; ಯಾರ ನಾಯಕತ್ವದಲ್ಲಿ?

ನಾಳೆಯಿಂದ ( ಆಗಸ್ಟ್ 27 ) ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದ್ದು ಪ್ರಥಮ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಉದ್ಘಾಟನಾ ಪಂದ್ಯ ಮುಗಿದ ನಂತರ ಟೂರ್ನಿಯ ಎರಡನೇ ದಿನದಂದು ( ಆಗಸ್ಟ್ 25, ಭಾನುವಾರ ) ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಜರುಗಲಿದೆ.
ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿರುವ ಏಕೈಕ ಟೂರ್ನಿ ಇದಾಗಿದ್ದು, ಈ ಮುಖಾಮುಖಿಯ ಕುರಿತಾಗಿ ಉಭಯ ತಂಡಗಳ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ವಿಶ್ವದ ಇತರೆ ಕ್ರಿಕೆಟ್ ತಂಡಗಳ ಅಭಿಮಾನಿಗಳಲ್ಲಿಯೂ ಸಹ ಕುತೂಹಲ ಏರ್ಪಟ್ಟಿದೆ. ಅದರಲ್ಲಿಯೂ ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋಲುವುದರ ಮೂಲಕ ಚೊಚ್ಚಲ ಬಾರಿಗೆ ಟಿಟ್ವೆಂಟಿ ವಿಶ್ವಕಪ್ ಪಂದ್ಯದಲ್ಲಿ ಸೋಲುಂಡ ಕಾರಣ ಇದೀಗ ಈ ಪಂದ್ಯ ಟೀಮ್ ಇಂಡಿಯಾಗೆ ಪ್ರತೀಕಾರ ತೀರಿಸಿಕೊಳ್ಳಲು ಸಿಕ್ಕಿರುವ ವೇದಿಕೆಯಾಗಿ ಪರಿಣಮಿಸಿದ್ದು, ಈ ಅಂಶ ಪಂದ್ಯದ ಮೇಲಿನ ನಿರೀಕ್ಷೆ ಮತ್ತು ಕುತೂಹಲವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿರುವ ಹತ್ತನೇ ಟಿ ಟ್ವೆಂಟಿ ಪಂದ್ಯ ಇದಾಗಿದ್ದು, ಇಲ್ಲಿಯವರೆಗೂ ಉಭಯ ತಂಡಗಳ ನಡುವೆ ನಡೆದಿರುವ 9 ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳಲ್ಲಿ ಭಾರತ 7 ಬಾರಿ ಜಯ ಸಾಧಿಸಿದ್ದರೆ, ಪಾಕಿಸ್ತಾನ ತಂಡ 2 ಬಾರಿ ಗೆಲುವನ್ನು ಕಂಡಿದೆ. ಹಾಗಿದ್ದರೆ ಟೀಮ್ ಇಂಡಿಯಾ ಸೋತಿರುವ ಆ 2 ಟಿ ಟ್ವೆಂಟಿ ಪಂದ್ಯಗಳು ಯಾವುವು ಮತ್ತು ಆ ಪಂದ್ಯಗಳಲ್ಲಿ ತಂಡವನ್ನು ನಾಯಕನಾಗಿ ಯಾರು ಮುನ್ನಡೆಸಿದ್ದರು ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಕೊಹ್ಲಿ ನಾಯಕತ್ವದಲ್ಲಿ ವಿಶ್ವಕಪ್ ಸೋಲು
ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಟೀಮ್ ಇಂಡಿಯಾ ನೀಡಿದ್ದ 152 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿ ಜಯವನ್ನು ಸಾಧಿಸಿತ್ತು. ಇದು ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧ ಸಾಧಿಸಿದ ಮೊದಲನೇ ವಿಶ್ವಕಪ್ ಜಯವಾಗಿತ್ತು ಹಾಗೂ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧ ಗೆದ್ದ ಎರಡನೇ ಪಂದ್ಯವಾಗಿತ್ತು.

ಧೋನಿ ನಾಯಕತ್ವದಲ್ಲಿಯೂ ಟಿ ಟ್ವೆಂಟಿ ಸೋಲು
ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧ ಮೊದಲ ಬಾರಿಗೆ ಟಿ ಟ್ವೆಂಟಿ ಜಯ ಸಾಧಿಸಿದ್ದು 2012ರಲ್ಲಿ. ಅಂದು ಭಾರತ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ತಂಡ ಮೊದಲನೇ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ 5 ವಿಕೆಟ್‍ಗಳ ಗೆಲುವನ್ನು ದಾಖಲಿಸಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 134 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 134 ರನ್ ಕಲೆಹಾಕಿದ ಪಾಕಿಸ್ತಾನ ಜಯ ಸಾಧಿಸಿತ್ತು.

ಏಷ್ಯಾಕಪ್ ಮುಖಾಮುಖಿ
ಏಷ್ಯಾಕಪ್ ಟೂರ್ನಿ 1984ರಿಂದ ನಡೆಯುತ್ತಿದ್ದು, ಅಂತಿಮವಾಗಿ 2017ರಲ್ಲಿ ಟೂರ್ನಿ ಜರುಗಿತ್ತು. ಈ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 14 ಏಷ್ಯಾಕಪ್ ಟೂರ್ನಿಯ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ 8 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ್ದರೆ, ಪಾಕಿಸ್ತಾನ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿದೆ. ಈ ಮೂಲಕ ಉಭಯ ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications