IND vs SL 1st ODI : ನಾಯಕ ದಸುನ್ ಶನಕ ಹೋರಾಟ ವ್ಯರ್ಥ, 67 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 67 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ 2023ರ ಕ್ರಿಕೆಟ್ ವರ್ಷವನ್ನು ಶುಭಾರಂಭ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ಕಳೆದುಕೊಂಡು 373 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿ 67 ರನ್‌ಗಳ ಸೋಲೊಪ್ಪಿಕೊಂಡಿತು. ನಾಯಕ ದಸುನ್ ಶನಕ 88 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿದರು, ಸೋಲಿನಿಂದ ತಂಡವನ್ನು ಪಾರುಮಾಡಲಾಗಲಿಲ್ಲ.
ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಜೊತೆಯಾಟ ಆಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 143 ರನ್ ಕಲೆ ಹಾಕಿ ಬೃಹತ್ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿದರು.
ನಾಯಕ ರೋಹಿತ್ ಶರ್ಮಾ 67 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ 83 ರನ್ ಗಳಿಸಿದರು. ಅಪಾಯಕಾರಿಯಾಗಿ ಕಾಣುತ್ತಿದ್ದ ರೋಹಿತ್ ಶರ್ಮಾ ಮತ್ತೊಂದು ದೊಡ್ಡ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದರು, ಆದರೆ ದಿಲ್ಷಾನ್ ಮಧುಶಂಕ ಎಸೆತದಲ್ಲಿ ಬ್ಯಾಟ್‌ಗೆ ತಾಗಿದ ಚೆಂಡು ವಿಕೆಟ್‌ಗೆ ಬಡಿದು ಔಟ್ ಆದರು. ಮತ್ತೊಬ್ಬ ಆರಂಭಿಕ ಆಟಗಾರ ಶುಭಮನ್ ಗಿಲ್ ಕೂಡ 60 ಎಸೆತಗಳಲ್ಲಿ 70 ರನ್ ಗಳಿಸಿ ಸಾಥ್ ನೀಡಿದರು.

ಬರ್ಸಾಪುರ ಅಂಗಳದಲ್ಲಿ ಕೊಹ್ಲಿ ಆರ್ಭಟ
ಅತ್ಯುತ್ತಮ ಆರಂಭ ಪಡೆದ ನಂತರ ಕ್ರೀಸ್‌ಗೆ ಬಂದ ಕೊಹ್ಲಿ ಆರಂಭದಿಂದಲೇ ವೇಗವಾಗಿ ರನ್ ಗಳಿಸಲು ಆರಂಭಿಸಿದರು. ಟಿ20 ಸರಣಿಯಿಂದ ವಿಶ್ರಾಂತಿ ಪಡೆದು ವಾಪಸಾದ ವಿರಾಟ್ ಕೊಹ್ಲಿ ಸಾಕಷ್ಟು ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಮಾಡಿದರು.
ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ರಿಗಿಂತ ಕಡಿಮೆ ಇನ್ನಿಂಗ್ಸ್‌ನಲ್ಲಿ 12500 ರನ್ ಗಳಿಸುವ ಮೂಲಕ ವೇಗವಾಗಿ 12500 ರನ್ ಗಳಿಸಿದ ಆಟಗಾರ ಎನಿಸಿಕೊಂಡರು. 73ನೇ ಶತಕವನ್ನು ಕೂಡ ಪೂರೈಸಿದ ಕೊಹ್ಲಿ, ಮೂರು ವರ್ಷಗಳ ಬಳಿಕ ಭಾರತದಲ್ಲಿ ಶತಕ ದಾಖಲಿಸಿದ ಸಾಧನೆ ಮಾಡಿದರು. ಅಂತಿಮವಾಗಿ 87 ಎಸೆತಗಳಲ್ಲಿ 113 ರನ್ ಗಳಿಸಿ ಔಟಾದರು.
IND vs SL: ಸಚಿನ್‌ರ ಈ ದೊಡ್ಡ ದಾಖಲೆಯನ್ನು ಕೊಹ್ಲಿ ಶೀಘ್ರದಲ್ಲೇ ಮುರಿಯಲಿದ್ದಾರೆ; ಸಂಜಯ್ ಮಂಜ್ರೇಕರ್

ಟೀಂ ಇಂಡಿಯಾ ಬೃಹತ್ ಮೊತ್ತ
ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 373 ರನ್ ಗಳಿಸಿತು. ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 29 ಎಸೆತಗಳಲ್ಲಿ 39 ರನ್ ಗಳಿಸಿ ವಿರಾಟ್ ಕೊಹ್ಲಿಗೆ ಉತ್ತಮವಾಗಿ ಸಾಥ್ ನೀಡಿದರು.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 14 ರನ್ ಗಳಿಸಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಅಕ್ಷರ್ ಪಟೇಲ್ 9 ರನ್ ಗಳಿಸಿ ಔಟಾದರು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಕ್ರಮವಾಗಿ ಅಜೇಯ 4 ಮತ್ತು 7 ರನ್ ಗಳಿಸಿದರು. ಶ್ರೀಲಂಕಾ ಪರವಾಗಿ ಕಸುನ್ ರಜಿತ 3 ವಿಕೆಟ್ ಪಡೆದು ಮಿಂಚಿದರು. ದಿಲ್ಷುನ್ ಮಧುಶಂಕ, ಚಮಿಕಾ ಕರುಣರತ್ನೆ, ದಸುನ್ ಶನಕ ಮತ್ತು ಧನಂಜಯ ಡಿಸಿಲ್ವ ತಲಾ ಒಂದು ವಿಕೆಟ್ ಪಡೆದರು.

ದಸುನ್ ಶನಕ ಶತಕ ವ್ಯರ್ಥ
ಟೀಂ ಇಂಡಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಆರಂಭದಲ್ಲೇ ಆಘಾತ ಅನುಭವಿಸಿತು. ಆರಂಭದಲ್ಲೇ ಆವಿಷ್ಕಾ ಫರ್ನಾಂಡೋ (5), ಕುಶಾಲ್ ಮೆಂಡಿಸ್ (0) ಔಟ್ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದರು.
ಪಾಥುಮ್ ನಿಸಾಂಕ 72 ರನ್ ಗಳಿಸಿ ಹೋರಾಟ ನೀಡಿದರು, ಉಮ್ರಾನ್ ಮಲಿಕ್ ಅವರನ್ನು ಔಟ್ ಮಾಡಿದರು. ಶ್ರೀಲಂಕಾ ನಾಯಕ ದಸುನ್ ಶನಕ ಶತಕ ಗಳಿಸಿದರೂ ಕೂಡ ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. 88 ಎಸೆತಗಳಲ್ಲಿ 12 ಬೌಂಡರಿ 3 ಸಿಕ್ಸರ್ ಸಹಿತ 108 ರನ್ ಗಳಿಸಿದರು.
ವೇಗಿ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications