
ಶುಭ್‌ಮನ್ ಗಿಲ್‌ಗೆ ಅವಕಾಶ ಕಲ್ಪಿಸಲು ಇಶಾನ್ ಕಿಶನ್ ಡ್ರಾಪ್
ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದ ಇಶಾನ್ ಕಿಶನ್ ಕೈಬಿಟ್ಟು ಶುಭಮನ್ ಗಿಲ್‌ರನ್ನು ಆಡುವ ಹನ್ನೊಂದರ ಬಳಗದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಆಯ್ಕೆ ಮಾಡಿದರು. ಈ ನಿರ್ಧಾರ ಹಲವು ಮಾಜಿ ಕ್ರಿಕೆಟಿಗರನ್ನು ಕೆರಳಿಸಿದೆ.
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಶುಭ್‌ಮನ್ ಗಿಲ್‌ಗೆ ಅವಕಾಶ ಕಲ್ಪಿಸಲು ದ್ವಿಶತಕ ವೀರ ಇಶಾನ್ ಕಿಶನ್ ಅವರನ್ನು ಕೈಬಿಡುವ ತಂಡದ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸೇರಿ ಹಲವರು ಕಟುವಾಗಿ ಟೀಕಿಸಿದ್ದಾರೆ.

131 ಎಸೆತಗಳಲ್ಲಿ 210 ರನ್ ಗಳಿಸಿದ್ದ ಇಶಾನ್ ಕಿಶನ್
ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಎಡಗೈ ಬ್ಯಾಟರ್ ಇಶಾನ್ ಕಿಶನ್ 126 ಎಸೆತಗಳಲ್ಲಿ ವೇಗದ ದ್ವಿಶತಕ ಗಳಿಸಿದರು ಮತ್ತು ಅಂತಿಮವಾಗಿ 131 ಎಸೆತಗಳಲ್ಲಿ 210 ರನ್ ಗಳಿಸಿದ್ದರು. ಇದು ತಂಡದ ಮ್ಯಾನೇಜ್‌ಮೆಂಟ್ ಕಣ್ಣಿಗೆ ಬಿದ್ದಲ್ಲವೇ ಎಂದು ಕಿಡಿಕಾರಿದ್ದಾರೆ.
ಟಾಸ್ ನಂತರ ಭಾರತದ ಆಡುವ 11ರ ಬಳಗವನ್ನು ಪ್ರಕಟಿಸುತ್ತಿದ್ದಂತೆ, ಬಾಂಗ್ಲಾದೇಶದ ವಿರುದ್ಧದ ತನ್ನ ಕೊನೆಯ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದರೂ ಇಶಾನ್ ಕಿಶನ್ 11ರ ಬಳಗದಲ್ಲಿ ಕಾಣಸಿದಿರುವುದನ್ನು ನೋಡಿ ಹಲವಾರು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲದೆ, ಶನಿವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೀಲಂಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್‌ಗೂ ಸ್ಥಾನ ಸಿಗಲಿಲ್ಲ.

ತಂಡದ ಮ್ಯಾನೇಜ್‌ಮೆಂಟ್ ನಿರ್ಧಾರದ ಬಗ್ಗೆ ಕೈಫ್ ಅಸಮಾಧಾನ
ಭಾರತ ತಂಡದಲ್ಲಿ ಇಶಾನ್ ಕಿಶನ್ ಮತ್ತು ಸೂಯರ್ತಕುಮಾರ್ ಯಾದವ್ ಇಲ್ಲದಿರುವುದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಲೆಕೆಡಿಸಿಕೊಂಡರು ಮತ್ತು ತಂಡದ ಮ್ಯಾನೇಜ್‌ಮೆಂಟ್ ನಿರ್ಧಾರದ ಬಗ್ಗೆ ಅಸಮಾಧಾನಗೊಂಡರು.
"ಕಳೆದ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಇಶಾನ್ ಕಿಶನ್ ಮತ್ತು ಕೊನೆಯ ಟಿ20 ಶತಕವೀರ ಸೂರ್ಯಕುಮಾರ್ ಯಾದವ್ ಇಲ್ಲದೆ ಇಂದು ಭಾರತ ತಂಡವನ್ನು ವೀಕ್ಷಿಸುವ ನಿರೀಕ್ಷೆ ಹುಸಿಯಾಗಿದೆ. ಅವರು ಮುಂದಿನ ಪಂದ್ಯದಲ್ಲಿ ತಂಡದಲ್ಲಿರುತ್ತಾರೆ ಎಂದು ಭಾವಿಸುತ್ತೇನೆ," ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.
ಶ್ರೀಲಂಕಾ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಅವಿಷ್ಕ ಫೆರ್ನಾಂಡೋ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ.


Click it and Unblock the Notifications