ಗುರುವಾರ, ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳ ಅನಾಯಾಸ ಗೆಲುವು ದಾಖಲಿಸಿತು.
ಇನ್ನು ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಆಡುವ 11ರ ಬಳಗದಿಂದ ಹೊರಗಿಟ್ಟಿದ್ದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಕಿಡಿಕಾರಿದರು.

ಅನಿರೀಕ್ಷಿತವಾಗಿ, ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಅವರಿಗಿಂತ ಮುನ್ನ ಇಶಾನ್ ಕಿಶನ್ ಆಯ್ಕೆಯಾದರು. 28 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಸ್ಯಾಮ್ಸನ್ ಏಕದಿನ ಸ್ವರೂಪದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ.
ಆಡಿದ 11 ಪಂದ್ಯಗಳಿಂದ 66.00 ಸರಾಸರಿ ಮತ್ತು 104.76 ಸ್ಟ್ರೈಕ್‌ರೇಟ್‌ನಲ್ಲಿ 330 ರನ್ ಗಳಿಸಿದ್ದಾರೆ. ಆದರೆ, ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ಗೆ ಸತತವಾಗಿ ತಂಡದ ಆಡುವ 11ರ ಬಳಗದಿಂದ ಹೊರಗಿಡಲಾಗಿದೆ.
ಆಚ್ಚರಿ ಬೆಳವಣಿಗೆಯಲ್ಲಿ, ಮೊದಲ ಪಂದ್ಯದ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಬೆನ್ನಿನ ಮೇಲೆ 'ಸ್ಯಾಮ್ಸನ್' ಎಂದು ಬರೆದಿದ್ದ ಜೆರ್ಸಿಯನ್ನು ಧರಿಸಿ ಆಡುವುದು ಕಂಡುಬಂತು.
ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರು ಸಂಜು ಸ್ಯಾಮ್ಸನ್ ಅವರ ಜರ್ಸಿಯನ್ನು ಧರಿಸಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ ಎಸ್ ಬದರಿನಾಥ್ ಅವರು ಬಿಸಿಸಿಐ ವಿರುದ್ಧ ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.
"ಸಂಜು ಸ್ಯಾಮ್ಸನ್ ಭಾರತ ತಂಡದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಏಕೈಕ ಮಾರ್ಗದಂತೆ ತೋರುತ್ತಿದೆ," ಎಂದು 42 ವರ್ಷದ ಎಸ್ ಬದರಿನಾಥ್ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದ ಭಾರತ
ಮೊದಲ ಏಕದಿನ ಪಂದ್ಯದ ಬಗ್ಗೆ ಹೇಳೂವುದಾದರೆ, ಭಾರತ ತಂಡ ಟಾಸ್ ಗೆದ್ದು ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಅತ್ಯಂತ ಕಳಪೆ ಮಟ್ಟದಲ್ಲಿ ಪ್ರದರ್ಶನ ನೀಡಿತು.
ಭಾರತದ ಪರ ಕುಲದೀಪ್ ಯಾದವ್ 6 ರನ್‌ಗೆ 4 ವಿಕೆಟ್ ಮತ್ತು ರವೀಂದ್ರ ಜಡೇಜಾ 37 ರನ್‌ಗೆ 3 ವಿಕೆಟ್ ಪಡೆದು ಮಿಂಚಿದರು. ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಭಾರತದ ಬೌಲರ್‌ಗಳು 114 ರನ್‌ಗಳಿಗೆ ನಿಯಂತ್ರಿಸಿದರು.
ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ 45 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ತಮ್ಮ ತಂಡದ ಪರ ಗರಿಷ್ಠ ಸ್ಕೋರ್ ಮಾಡಿದ ಬ್ಯಾಟರ್ ಎನಿಸಿದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಕ್ರಮಾಂಕದಲ್ಲಿ ಬದಲಾವಣೆಗಳೊಂದಿಗೆ ಮೈದಾನಕ್ಕಿಳಿಯಿತು. ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಪ್ರಾರಂಭಿಸಿದರು. ನಾಯಕ ರೋಹಿತ್ ಶರ್ಮಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಯುವ ಆಟಗಾರರಿಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲಿಲ್ಲ.
ಸುಲಭ ಗುರಿ ಬೆನ್ನಟ್ಟಿದ ಭಾರತದ ಪರ ಇಶಾನ್ ಕಿಶನ್ ಅರ್ಧಶತಕ ಬಾರಿಸಿದರು ಮತ್ತು ಭಾರತ ಐದು ವಿಕೆಟ್‌ಗಳಿಂದ ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು.
ಶನಿವಾರ, ಜುಲೈ 29ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯವೂ ಕೂಡ ಬಾರ್ಬಡೋಸ್‌ನಲ್ಲಿ ನಡೆಯಲಿದೆ.