ಗುರುವಾರ, ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಪ್ರವಾಸಿ ಭಾರತ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಇದಕ್ಕೂ ಮುನ್ನ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದುಕೊಂಡಿತು. ಇನ್ನು ವೆಸ್ಟ್ ಇಂಡೀಸ್ ವಿರುದ್ಧ 2006ರಿಂದ ಇದುವರೆಗೆ ಏಕದಿನ ಸರಣಿಯನ್ನು ಭಾರತ ಸೋತಿಲ್ಲ.

ಇನ್ನು ಎರಡೇ ತಿಂಗಳುಗಳಲ್ಲಿ 2023ರ ಏಕದಿನ ವಿಶ್ವಕಪ್ ನಡೆಯಲಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯು ವಿಶ್ವಕಪ್ ಪೂರ್ವಸಿದ್ಧತಾ ಪ್ರಕ್ರಿಯೆಯ ಭಾಗವಾಗಿದೆ.
ಇನ್ನು ಮೊದಲ ಏಕದಿನ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಅವರು ಭಾರತದ ಆಡುವ 11ರ ಬಳಗದ ಬಗ್ಗೆ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ವಾಸಿಂ ಜಾಫರ್ ಅವರು ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದರೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಸ್ಪಿನ್ನರ್‌ಗಳನ್ನಾಗಿ ಇರಿಸಿದ್ದಾರೆ. ಇನ್ನು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಹೊರಗಿಟ್ಟಿದ್ದಾರೆ.
ಮೊದಲ ಏಕದಿನ ಪಂದ್ಯಕ್ಕೆ ವಾಸಿಂ ಜಾಫರ್ ಆಯ್ಕೆ ಭಾರತದ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಇದೇ ವೇಳೆ, ಭಾರತೀಯ ಕ್ರಿಕೆಟ್ ತಂಡದ ಪ್ರಸ್ತುತ ಇಬ್ಬರು ಮುಂಚೂಣಿಯಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ವೈಯಕ್ತಿಕ ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 13,000 ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಕೇವಲ 102 ರನ್‌ಗಳ ಅವಶ್ಯಕತೆ ಇದೆ. ಸಚಿನ್ ತೆಂಡೂಲ್ಕರ್, ಕುಮಾರ್ ಸಂಗಕ್ಕಾರ ಮತ್ತು ರಿಕಿ ಪಾಂಟಿಂಗ್ ನಂತರ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ.
ಭಾರತೀಯ ರನ್ ಮಷಿನ್ ವಿರಾಟ್ ಕೊಹ್ಲಿ 274 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 57.32ರ ಸರಾಸರಿಯೊಂದಿಗೆ 12,898 ರನ್ ಗಳಿಸಿದೆ. ಕೊಹ್ಲಿ ಇಲ್ಲಿಯವರೆಗೆ 46 ಶತಕ ಮತ್ತು 65 ಅರ್ಧಶತಕಗಳನ್ನು ಬಾರಿಸಿದ್ದಾರೆ.
ನಾಯಕ ರೋಹಿತ್ ಶರ್ಮಾ ಪ್ರಸ್ತುತ 9,825 ರನ್‌ಗಳನ್ನು ಗಳಿಸಿರುವ ಕಾರಣ ಏಕದಿನ ಸ್ವರೂಪದ ಕ್ರಿಕೆಟ್‌ನಲ್ಲಿ ತಮ್ಮ 10,000 ರನ್‌ಗಳನ್ನು ಪೂರ್ಣಗೊಳಿಸುವ ಸಮೀಪದಲ್ಲಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಆರನೇ ಭಾರತೀಯ ಆಟಗಾರನಾಗುವ ಮೂಲಕ ಗಣ್ಯರ ಪಟ್ಟಿ ಸೇರಲಿದ್ದಾರೆ.
ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ 243 ಏಕದಿನ ಪಂದ್ಯಗಳಲ್ಲಿ 48.63ರ ಸರಾಸರಿ ಹೊಂದಿದ್ದಾರೆ ಮತ್ತು 30 ಶತಕ ಮತ್ತು 48 ಅರ್ಧ ಶತಕಗಳನ್ನು ಗಳಿಸಿದ್ದಾರೆ.