IND vs WI 3rd T20: ಭಾರತ vs ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ 11ರ ಬಳಗ; ಸಂಜು ಬದಲಿಗೆ ಜೈಸ್ವಾಲ್?
ಮಂಗಳವಾರ, ಆಗಸ್ಟ್ 8ರಂದು ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿಗಾಗಿ ಸೆಣಸಾಡಲಿದೆ.
ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತಿರುವ ಪ್ರವಾಸಿ ಭಾರತ ತಂಡ ಈಗಾಗಲೇ ಸರಣಿಯಲ್ಲಿ 0-2 ಅಂತರದ ಹಿನ್ನಡೆ ಅನುಭವಿಸಿದೆ. ಸರಣಿ ಜೀವಂತವಾಗಿರಿಸಿಕೊಳ್ಳಬೇಕಾದರೆ ಭಾರತ ತಂಡ ಮೂರನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಗಯಾನಾದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು 2 ವಿಕೆಟ್‌ಗಳ ರೋಚಕ ಸೋಲಿನಿಂದ ಕಂಗೆಟ್ಟಿರುವ ಭಾರತ ಇಂದಿನ ಪಂದ್ಯದಲ್ಲಿ ಸರಣಿಯಲ್ಲಿ ಪುಟಿದೇಳಲು ಎದುರು ನೋಡುತ್ತಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿರುವ ಕಾರಣ, ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ತಮ್ಮ ಆಡುವ 11ರ ಬಳಗದಲ್ಲಿ ಕೆಲವು ಬದಲಾವಣೆ ಮಾಡಬಹುದು.

ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲವಾಗಿರುವ ಸಂಜು ಸ್ಯಾಮ್ಸನ್ ಬದಲಾಗಿ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಬದಲಾವಣೆಯಿಂದ ಶುಭ್ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ.
ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಭಾರತದ ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ನಿರೀಕ್ಷೆಯಿದೆ. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಇಬ್ಬರು ಆಲ್‌ರೌಂಡರ್‌ಗಳಾಗಿ ಆಡಬಹುದು.
ಗಾಯದ ಸಮಸ್ಯೆಯಿಂದ ಎರಡನೇ ಟಿ20 ಪಂದ್ಯದಿಂದ ಹೊರಗುಳಿದಿದ್ದ ಕುಲದೀಪ್ ಯಾದವ್ ಅವರು ರವಿ ಬಿಷ್ಣೋಯ್ ಬದಲಿಗೆ ಆಡುವ ಬಳಗಕ್ಕೆ ಮರಳಬಹುದು. ಮೊದಲ ಟಿ20 ಪಂದ್ಯದಲ್ಲಿ 24 ರನ್ ಮತ್ತು ಎರಡನೇ ಟಿ20 ಪಂದ್ಯದಲ್ಲಿ 35 ರನ್ ಬಿಟ್ಟುಕೊಟ್ಟು, ಎರಡು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿರುವ ಮುಖೇಶ್ ಕುಮಾರ್ ಬದಲಿಗೆ ವೇಗಿ ಉಮ್ರಾನ್ ಮಲಿಕ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಸಂಬಂಧಿಸಿದಂತೆ, ವೇಗದ ಬೌಲಿಂಗ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಗಯಾನಾದಲ್ಲಿ ನಡೆದ ಎರಡನೇ ಟಿ20 ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಗಾಯಗೊಂಡಿದ್ದಾರೆ. ಆದರೆ, ಮೂರನೇ ಪಂದ್ಯದ ಸಮಯದಲ್ಲಿ ಅವರು ಚೇತರಿಸಿಕೊಂಡರೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದು.
ವೆಸ್ಟ್ ಇಂಡೀಸ್ ತಮ್ಮ ಗೆಲುವಿನ ಸೂತ್ರಕ್ಕೆ ಅಂಟಿಕೊಳ್ಳಲು ಮತ್ತು 2016ರ ನಂತರ ಮೊದಲ ಬಾರಿಗೆ ಭಾರತದ ವಿರುದ್ಧ ಟಿ20 ಸರಣಿ ಗೆಲುವು ದಾಖಲಿಸಲು ಎದುರು ನೋಡುತ್ತಿದೆ.
ಭಾರತ vs ವೆಸ್ಟ್ ಇಂಡೀಸ್ 3ನೇ ಟಿ20 ಪಂದ್ಯಕ್ಕೆ ಸಂಭಾವ್ಯ ಆಡುವ 11ರ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್.
ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications