IND vs WI 3ನೇ ಟಿ20: ಭಾರತ ಮತ್ತು ವಿಂಡೀಸ್ ನಡುವಿನ ಟಿ20 ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ತಂಡ ಯಾವುದು?

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕೆರಿಬಿಯನ್ನರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಈಗಾಗಲೇ ಇತ್ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮುಕ್ತಾಯವಾಗಿದ್ದು, ಶಿಖರ್ ಧವನ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಈ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿ ಕೆರಿಬಿಯನ್ನರಿಗೆ ಅವರ ತವರಿನಲ್ಲಿಯೇ ವೈಟ್ ವಾಷ್ ಮುಖಭಂಗ ಮಾಡಿತ್ತು.
ಹೀಗೆ ಏಕದಿನ ಸರಣಿಯಲ್ಲಿ ಬೃಹತ್ ಜಯ ಸಾಧಿಸಿದ ನಂತರ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ ಟ್ವೆಂಟಿ ಸರಣಿಯನ್ನು ಆಡುತ್ತಿದ್ದು, 5 ಪಂದ್ಯಗಳುಳ್ಳ ಈ ಸರಣಿಯ ಪ್ರಥಮ ಪಂದ್ಯದಲ್ಲಿ ಜಯ ಸಾಧಿಸಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಆದರೆ ನಿನ್ನೆ ( ಆಗಸ್ಟ್ 1 ) ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲುಣಿಸಿದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿದೆ.
ಹೌದು, ವಾರ್ನರ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 19.4 ಓವರ್‌ಗಳಲ್ಲಿ 138 ರನ್ ಕಲೆಹಾಕಿ ಆಲ್ ಔಟ್ ಆದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡಕ್ಕೆ 139 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತ್ತು. ಆದರೆ, ಈ ಗುರಿಯನ್ನು 19.2 ಓವರ್‌ಗಳಲ್ಲಿ ಮುಟ್ಟಿದ ವೆಸ್ಟ್ ಇಂಡೀಸ್ 5 ವಿಕೆಟ್ ನಷ್ಟಕ್ಕೆ 141 ರನ್ ಕಲೆಹಾಕಿ 5 ವಿಕೆಟ್‍ಗಳ ಜಯ ಸಾಧಿಸಿತು. ಈ ಮೂಲಕ ಸರಣಿಯಲ್ಲಿ ಉಭಯ ತಂಡಗಳು ಸಮಬಲ ಕಾಯ್ದುಕೊಂಡಿದ್ದು, ಇಂದು ( ಆಗಸ್ಟ್ 2 ) ನಡೆಯಲಿರುವ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಜಯ ಸಾಧಿಸಿ ಮುನ್ನಡೆ ಕಾಯ್ದುಕೊಳ್ಳುವತ್ತ ಚಿತ್ತ ನೆಟ್ಟಿವೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ತೃತೀಯ ಟಿ ಟ್ವೆಂಟಿ ಪಂದ್ಯ ಇಂದು ರಾತ್ರಿ 8 ಗಂಟೆಗೆ ಆರಂಭಗೊಳ್ಳಲಿದ್ದು, ಈ ಪಂದ್ಯವು ಕೂಡ ಸೇಂಟ್ ಕಿಟ್ಸ್ ವಾರ್ನರ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವೆ ನಡೆದಿರುವ ಪಂದ್ಯಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯ ಗೆದ್ದಿದೆ ಹಾಗೂ ಉಭಯ ತಂಡಗಳ ನಡುವಿನ ಒಟ್ಟಾರೆ ಟಿಟ್ವೆಂಟಿ ಮುಖಾಮುಖಿಯಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದು ಬಲಿಷ್ಠವಾಗಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಟಿ ಟ್ವೆಂಟಿ ಮುಖಾಮುಖಿ
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 21 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ 14 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ವೆಸ್ಟ್ ಇಂಡೀಸ್ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ ಮತ್ತು ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಈ ಮೂಲಕ ಉಭಯ ತಂಡಗಳ ನಡುವಿನ ಟಿ ಟ್ವೆಂಟಿ ಮುಖಾಮುಖಿ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ.

ವಾರ್ನರ್ ಪಾರ್ಕ್ ಟಿಟ್ವೆಂಟಿ ಮುಖಾಮುಖಿ
ಇನ್ನು ಸೇಂಟ್ ಕಿಟ್ಸ್ ನಗರದ ವಾರ್ನರ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಲ್ಲಿಯವರೆಗೂ ಕೇವಲ ಒಂದೇ ಒಂದು ಟಿ 20 ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯ ನಿನ್ನೆಯಷ್ಟೆ ಮುಗಿದಿದ್ದು, ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿ ಹಿಡಿತವನ್ನು ಸಾಧಿಸಿದೆ.
ಇನ್ನು ಇದೇ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈ ಹಿಂದೆ ಏಕದಿನ ಪಂದ್ಯವೊಂದರಲ್ಲಿ ಮುಖಾಮುಖಿಯಾಗಿದ್ದವು. 2006ರ ಮೇ 23ರಂದು ಈ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ವೆಸ್ಟ್ ಇಂಡೀಸ್ 4 ವಿಕೆಟ್‍ಗಳ ಗೆಲುವನ್ನು ಕಂಡಿತ್ತು. ಈ ಮೂಲಕ ಇಲ್ಲಿ ಇತ್ತಂಡಗಳ ನಡುವೆ ನಡೆದಿರುವ ಎಲ್ಲಾ ಸೀಮಿತ ಓವರ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವೇ ಜಯ ಸಾಧಿಸಿದೆ.

ಸಂಭಾವ್ಯ ಆಡುವ ಬಳಗ
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ/ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್
ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಓಡಿಯನ್ ಸ್ಮಿತ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications